

ಮಡಿಕೇರಿ: ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ನಿಯಮಿತದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ನಗರದ ಕೊಡವ ಸಮಾಜದಲ್ಲಿ ಸೆ೨೨ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೧ ಗಂಟೆಗೆ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು ೯೦೭೩ ಸದಸ್ಯರಿಂದ ಒಟ್ಟು ರೂ ೧.೨೮ ಕೋಟಿ ಹಾಗೂ ರಾಜ್ಯ ಸರ್ಕಾರದ ೩ ಕೋಟಿ ಸೇರಿ ಒಟ್ಟು ೪.೩೨ ಕೋಟಿ ಪಾಲು ಬಂಡವಾಳವಿರುತ್ತದೆ. ಸಂಘ ಪ್ರಸಕ್ತ ಸಾಲಿನಲ್ಲಿ ೧೪.೭೧ ಲಕ್ಷ ಲಾಭಗಳಿಸಿದೆ ಎಂದು ಮಾಹಿತಿ ನೀಡಿದರು.
ಸಂಘಕ್ಕೆ ಸಾಕಷ್ಟು ಆಸ್ತಿಯಿದೆ. ಆದರೆ, ಹಣವಿಲ್ಲದೇ ನಿರ್ವಾಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಲಾಭಾಂಶ ಕಳೆದು ೧೩.೮೧ ಕೋಟಿ ನಷ್ಟದಲ್ಲಿ ಮುಂದುವರಿಯುತ್ತಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ತಾಕೇರಿ ಪೊನ್ನಪ್ಪ, ವ್ಯವಸ್ಥಾಪಕ ಮುಕ್ಕಾಟಿರ ನಾಣಯ್ಯ, ನಿರ್ದೇಶಕರಾದ ಚಟ್ರಂಡ ಲೀಲಾ ಮೇದಪ್ಪ, ನಾಪಂಡ ರವಿ ಕಾಳಪ್ಪ, ಪಾಸುರ ಕಾರ್ಯಪ್ಪ ಇದ್ದರು.