ಬಡಗಬೆಟ್ಟು ಸೊಸೈಟಿಗೆ 15.47 ಕೋಟಿ ರೂ. ನಿವ್ವಳ ಲಾಭ

udp-7-badagabettu
Published on

ಉಡುಪಿ: ಬಡಗಬೆಟ್ಟು ಕ್ರೆಡಿಟ್​ ಕೋ ಆಪರೇಟಿವ್​ ಸೊಸೈಟಿ 2024&-25ನೇ ಸಾಲಿನಲ್ಲಿ ಸುಮಾರು 2,956 ಕೋಟಿ ರೂ. ಮೇಲ್ಪಟ್ಟು ವಾರ್ಷಿಕ ವಹಿವಾಟು ನಡೆಸಿದ್ದು, 15.47 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್​ ಘೋಷಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಭಾನುವಾರ ಜರಗಿದ ಬಡಗಬೆಟ್ಟು ಕ್ರೆಡಿಟ್​ ಕೋ- ಆಪರೇಟಿವ್​ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕುಂದಾಪುರದಲ್ಲಿ ಶ್ರೀದಲ್ಲಿ 12ನೇ ಶಾಖೆ ಪ್ರಾರಂಭವಾಗಲಿದ್ದು, ಈಗಾಗಲೇ 2.45 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ ಖರೀದಿಸಲಾಗಿದೆ. ಸೊಸೈಟಿಯ 1 ಎಕ್ರೆ ನಿವೇಶನದಲ್ಲಿ ಸುಸಜ್ಜಿತ ಸಹಕಾರ ಸೌಧ ನಿರ್ಮಾಣಕ್ಕೆ ಆರಂಭಿಕ ಹಂತದ ಯೋಜನೆಗಳು ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.

ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್​ ವಿ. ಶೇರಿಗಾರ್​ ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿ, ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 21,519 ಸದಸ್ಯರಿಂದ 4.83 ಕೋಟಿ ರೂ. ಪಾಲು ಬಂಡವಾಳ ಹಾಗೂ ರೂ. 573.19 ಕೋಟಿ ಠೇವಣಿ ಹೊಂದಿದ್ದು, 476.99 ಕೋಟಿ ರೂ. ಹೊರಬಾಕಿ ಸಾಲ ಹೊಂದಿದೆ ಎಂದು ತಿಳಿಸಿದರು.

ಸೊಸೈಟಿ ಡಿಜಿಟಲೀಕರಣದ ಹೆಜ್ಜೆಯಾಗಿ "ಚೇತನಾ ಮೊಬೈಲ್​ ಆ್ಯಪ್​ ಅಭಿವೃದ್ಧಿಪಡಿಸಲಾಗಿದೆ. ದೈನಿಕ ಠೇವಣೆ ಸಂಗ್ರಹಣೆಯನ್ನು ಮೊಬೈಲ್​ ಆಪ್​ ಮೂಲಕ ನಡೆಸಲಾಗುತ್ತಿದೆ. ಕೇವಲ ಬ್ಯಾಂಕಿಂಗ್​ ವ್ಯವಹಾರವನ್ನು ಮಾತ್ರ ನೆಚ್ಚಿಕೊಳ್ಳದೇ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ವಾರ್ಷಿಕ ಸುಮಾರು 25 ಲಕ್ಷ ರೂ. ಶಿಕ್ಷಣ, ಆರೋಗ್ಯ, ಸಾಂಸತಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ವಿನಿಯೋಜಿಸಲಾಗುತ್ತಿದೆ ಎಂದರು.

ಸನ್ಮಾನ

ಸತತ 216 ಗಂಟೆಗಳ ಕಾಲ ನಿರಂತರ ಭರತನಾಟ್ಯದ ಮೂಲಕ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ ನಲ್ಲಿ ದಾಖಲೆ ಬರೆದ ಬ್ರಹ್ಮಾವರದ ಆರೂರಿನ ವಿದುಷಿ ದೀಕ್ಷಾ ವಿ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಮಾಜಮುಖಿ ಕಾರ್ಯಕ್ರಮದ ಅಂಗವಾಗಿ ಸಂಘದ ಪ್ರಧಾನ ಶಾಖೆಯ ಸುತ್ತಮುತ್ತ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಜಾರ್ಜ್​ ಸಾಮ್ಯುವೆಲ್​, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್​, ಎಲ್​. ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ ಹಾಜಿ ಸಯ್ಯದ್​ ಅಬ್ದುಲ್​ ರಜಾಕ್​, ವಿನಯ ಕುಮಾರ್​ ಟಿ.ಎ., ಪದ್ಮನಾಭ ಕೆ. ನಾಯಕ್​, ಸದಾಶಿವ ನಾಯ್ಕ, ಸಾಧು ಸಾಲ್ಯಾನ್​, ಜಯಾ ಶೆಟ್ಟಿ ಉಪಸ್ಥಿತರಿದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್​ ಕೆ. ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವಿಣ್​ ಕುಮಾರ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net