ಸೆ.೧೦ ರಂದು ವಾರ್ಷಿಕ ಮಹಾಸಭೆ: ಸಾಧಕರಿಗೆ ಸನ್ಮಾನ

CHETHAN H.S
Published on

ಮಡಿಕೇರಿ: ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ಸೆ.೧೦ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್.ಚೇತನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಭೆಯಲ್ಲಿ ಸದಸ್ಯರ ಮಕ್ಕಳಿಗೆ ಪತ್ರಿಭಾ ಪುರಸ್ಕಾರ, ಸಾಧಕರಿಗೆ, ಹಿರಿಯ ಸದಸ್ಯರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪೋತ್ಸಾಹ ಧನ ವಿತರಣೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.


ರೂ.೨೨.೭೫ ಲಕ್ಷ ಲಾಭ: ಸಂಘ ಪ್ರಸ್ತುತ ೨೪೨೮ ಸದಸ್ಯರನ್ನು ಹೊಂದಿದ್ದು, ಸುಮಾರು ರೂ.೨೨ ಲಕ್ಷ ಲಾಭ ಗಳಿಸಿದೆ. ರೂ.೨.೮೯ ಕೋಟಿ ಪಾಲು ಬಂಡವಾಳವಿದ್ದು, ಒಟ್ಟು ವ್ಯವಹಾರ ರೂ.೩೭.೨೨ ಕೋಟಿಯಾಗಿದೆ. ಠೇವಣಿ ರೂ.೧೨.೫೪ ಕೋಟಿ ಇದ್ದು, ಪ್ರಸಕ್ತ ವರ್ಷ ರೂ.೮.೧೩ ಕೋಟಿ ಸಾಲ ನೀಡಲಾಗಿದೆ ಎಂದು ಚೇತನ್ ಮಾಹಿತಿ ನೀಡಿದ್ದಾರೆ.


೧೯ ಕೋಟಿ ಆಸ್ತಿ: ಸ್ವಾಯತ್ತತೆ, ಸ್ವಯಂನಿಯಂತ್ರಣ, ಸ್ವಯಂ ಆಡಳಿತ ತತ್ವದಂತೆ ಸೌಹಾರ್ದ ಸಹಕಾರಿ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಕೊಡಗಿನ ಮೊಟ್ಟ ಮೊದಲ ಸಹಕಾರಿ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘ ಶಿಕ್ಷಕರ ಆರ್ಥಿಕ ಅವಶ್ಯಕತೆಗಳಿಗೆ ವಿವಿಧ ರೂಪದಲ್ಲಿ ಸಾಲ ನೀಡಿ ಅವರ ಪ್ರಗತಿಗೆ ಶ್ರಮಿಸುತ್ತಿದೆ. ಸ್ವಂತ ಬಂಡವಾಳದ ಮೇಲೆ ವ್ಯವಹಾರ ನಡೆಸುತ್ತಿದ್ದು, ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಅಲ್ಲದೆ ನಗರದ ಬ್ರಾಹ್ಮಣರ ಬೀದಿಯಲ್ಲಿ ೪೨ ಸೆಂಟ್ ಜಾಗದಲ್ಲಿ ಗುರುಸದನ ಕಟ್ಟಡವಿದ್ದು, ಸಂಘದ ಬಳಿ ಪ್ರಸ್ತುತ ಒಟ್ಟು ೧೯ ಕೋಟಿ ರೂ.ಮೌಲ್ಯದ ಆಸ್ತಿ ಇದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net