ಔಷಧಿ ವ್ಯಾಪಾರಸ್ಥರ ಸಂಘದ ವಾರ್ಷಿಕ ಮಹಾಸಭೆ

Annual General Meeting of Pharmaceutical Traders Association
Published on

ಮಡಿಕೇರಿ:

ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದಿಂದ ಉದ್ದೇಶಿತ ಕೆಮಿಸ್ಟ್ ಭವನಕ್ಕೆ ಜನವರಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ ಜೀವನ್ ಹೇಳಿದರು. ಮಡಿಕೇರಿಯಲ್ಲಿ ಶುಕ್ರವಾರ ನಡೆದ ಸಂಘದ ೨೪ ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ನಗರದ ಚೈನ್ ಗೇಟ್ ಬಳಿಯಲ್ಲಿನ ಸಂಘದ ನಿವೇಶನದಲ್ಲಿ ಸುಸಜ್ಜಿತವಾಗಿ ೬೦ ಲಕ್ಷ ರೂ. ವೆಚ್ಚದಲ್ಲಿ ಕೆಮಿಸ್ಟ್ ಭವನ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲೆಯ ವಿವಿಧೆಡೆ ೨೬೦ ಔಷಧಿ ವ್ಯಾಪಾರಿಗಳಿದ್ದಾರೆ. ಹೊಸ ಸದಸ್ಯರು ಸಂಘಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಜಿಲ್ಲಾ ಸಂಘದಿಂದ ರಾಜ್ಯ ಸಂಘದಲ್ಲಿಯೂ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಕೊಡಗಿನ ಔಷಧಿ ವ್ಯಾಪಾರಿಗಳು ಗಮನ ಸೆಳೆದಿದ್ದಾರೆ ಎಂದರು.

ಸಂಘದ ರಾಜ್ಯ ಕಾನೂನು ಸಲಹೆಗಾರ ಹರೀಶ್ ಮಾತನಾಡಿ, ಕೇಂದ್ರ ಸರ್ಕಾರ ಔಷಧಿ ರಂಗದಲ್ಲಿ ನಾನಾ ಬದಲಾವಣೆ ತರುತ್ತಿದೆ. ಶೀಘ್ರದಲ್ಲಿಯೇ ೧೯೪೮ ರ ಔಷಧಿ ಸಂಬಂಧಿತ ಕಾನೂನಿಗೆ ತಿದ್ದುಪಡಿ ತರಲಾಗುತ್ತಿದೆ. ಈ ತಿದ್ದುಪಡಿ ಜಾರಿಯಾದಲ್ಲಿ, ಔಷಧೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ. ಫಾರ್ಮಸಿ ಕಾಲೇಜುಗಳ ನಿಯಂತ್ರಣ ರಾಷ್ಟ್ರೀಯ ಮಟ್ಟದಲ್ಲಿಯೇ ನಡೆಯುವಂತಾಗುತ್ತದೆ. ಅಂತೆಯೇ ಫಾರ್ಮಸಿ ಕಮಿಷನ್ ಎಂಬ ನೂತನ ಸಂಸ್ಥೆ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದ್ದು, ಈವರೆಗೆ ಅಸ್ತಿತ್ವದಲ್ಲಿದ್ದ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಕೆಲವು ಸಂಸ್ಥೆಗಳನ್ನು ರದ್ದುಗೊಳಿಸಲಾಗುತ್ತದೆ.

ಈ ಸಂಬಂಧಿತ ಇಂಧೋರ್ ನಲ್ಲಿ ಡಿ. ೧೫ ರಂದು ಮಹತ್ವದ ಸಭೆ ನಡೆಯಲಿದೆ. ಹಳೇ ನಿಯಮಗಳು ಬದಲಾಗಿ ಹೊಸ ನಿಯಮಗಳು ಜಾರಿಯಾದಾಗಔಷಧಿ ವ್ಯಾಪಾರಿಗಳು ಈ ಬಗ್ಗೆ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ತಾಲೂಕು ದಂಡಾಧಿಕಾರಿಯೂ ಔಷಧಿ ಮಳಿಗೆಗಳ ಪರಿಶೀಲನೆಗೆ ಕಾನೂನುಬದ್ದ ಅಧಿಕಾರ ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು.

ಕೊಡಗು ಔಷಧಿ ವ್ಯಾಪಾರಿಗಳ ಸಂಘದ ಸಂಘದ ಜಿಲ್ಲಾ ಗೌರವ ಕಾರ್ಯದರ್ಶಿ ಡಿ.ಐ. ಪುರುಷೋತ್ತಮ, ಉಪಾಧ್ಯಕ್ಷ ಅಂಬೆಕಲ್ ವಿನೋದ್, ಸಂಪತ್ ಕುಮಾರ್, ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಕೆ.ವಸಂತ್ ಕುಮಾರ್, ಖಜಾಂಜಿ ಪ್ರಸಾದ್ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net