

ಮದ್ದೂರು: ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘವು ಪ್ರಸ್ತುತ ವರ್ಷ 12.68 ಲಕ್ಷ ರೂ. ಲಾಭಗಳಿಸುವ ಮೂಲಕ ಉತ್ತಮವಾಗಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್.ಬಿ.ಸ್ವಾಮಿ ತಿಳಿಸಿದರು.
ಪಟ್ಟಣದ ಅನ್ನಪೂಣೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 1590 ಮಂದಿ ಷೇರುದಾರರಿದ್ದು, ಈ ವರ್ಷ ಸುಮಾರು 3.90 ಕೋಟಿ ರೂ. ವ್ಯವಹಾರ ನಡೆದಿದೆ. ಸಾಲ ಪಡೆದ ಷೇರುದಾರರು ಸಕಾಲಕ್ಕೆ ಮರು ಪಾವತಿ ಮಾಡುತ್ತಿರುವುದರಿಂದ ಸಂಘವು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದ ಪರಿಣಾಮ ತುಂಬಾ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಷೇರುದಾರರು ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಸ್ವಂತ ಕಟ್ಟಡ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಶೀಘ್ರವಾಗಿ ನೂತನ ಕಟ್ಟಡ ನಿರ್ಮಾಣವಾಗಿ ಷೇರುದಾರಿಗೆ ಅನುಕೂಲವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರಾದ ಎಂ.ಎನ್.ಬಸವರಾಜಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ನಂದೀಶ್, ಸಂಘದಲ್ಲಿ ಸೇವೆ ಮಾಡಿದ ಎನ್.ಜಯಕುಮಾರಿ ಹಾಗೂ ಪ್ರಸ್ತುತ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಭೀಮನಕೆರೆ ಬಸವರಾಜು, ನಿರ್ದೇಶಕರಾದ ಬಿ.ವಿ.ಮಂಜುನಾಥ್, ಎಸ್.ಎಂ.ಗಂಗಾಧರ, ಎಂ.ವೀರಭದ್ರಸ್ವಾಮಿ, ಎಂ.ವೀರೇಂದ್ರ, ಪಿ.ಬಿ.ಮಹದೇವಸ್ವಾಮಿ, ಪಿ.ತ್ರಿವೇಣಿ, ಎಸ್.ಸಿದ್ದಮ್ಮ, ಸಿ.ಜಿ.ಗೌರಿಶಂಕರ್, ಪಿ.ರಾಜಶೇಖರ, ಬಿ.ಪಿ.ವಿರೂಪಾಕ್ಷ ನಾಮರ್ದೇಶಕರಾದ ಎಂ.ಸಿದ್ದಲಿಂಗಪ್ರಸಾದ್, ವೈ.ಬಿ.ಶ್ರೀಕಂಠಸ್ವಾಮಿ, ಸಿಇಒ ರಾಜಮಣಿ, ನೌಕರರ ವರ್ಗದವರು ಇದ್ದರು.