೫.೫ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ

23blk1
ಭಾಲ್ಕಿ ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ೩೩ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ವೈಜಿನಾಥ ಪಾಟೀಲ್ ಜ್ಯಾಂತಿ ಉದ್ಘಾಟಿಸಿದರು. ಬಾಬುರಾವ ಪಾಟೀಲ್, ಬಾಬುರಾವ ತುಂಬಾ, ಶಿವಶಂಕರ ಪಾಟೀಲ್, ಸುರೇಖಾ ಶೆಟಕಾರ್, ನಳಿನಿ ಪಾಟೀಲ್, ರಮೇಶ ಚಿದ್ರಿ ಇದ್ದರು.
Published on

ಭಾಲ್ಕಿ: ಪ್ರಸಕ್ತ ಸಾಲಿನಲ್ಲಿ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ೫.೫ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಕಾರಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಜ್ಯಾಂತಿ ಹೇಳಿದರು.

ತಾಲೂಕಿನ ಹುಣಜಿ(ಎ) ಸಮೀಪದ ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ೩೩ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ೧೪೮ ದಿನಗಳ ಕಾಲ ಕಬ್ಬಿನ ಹಂಗಾಮು ನಡೆದಿದ್ದು, ೪೭೦೩೨೫ ಮೆಟ್ರಿಕ್ ಟನ್ ಕಬ್ಬು ನುರಿಸಿ ಕಬ್ಬು ಕಟಾವು ಮತ್ತು ಸಾಗಾಣಿಕೆ ಸೇರಿ ೧೬೪.೬೭ ಕೋಟಿ ರೂ. ಹಣ ಪಾವತಿಸಲಾಗಿದೆ ಎಂದರು.

ಪ್ರಸ್ತುತ ೨೦೨೪-೨೫ನೆಯ ಸಾಲಿನಲ್ಲಿ ಜಿಲ್ಲೆಯ ೩೯೯೬೪ ಎಕರೆ ಕಬ್ಬು ಕ್ಷೇತ್ರವನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ಇದರ ಆಧಾರದ ಮೇಲೆ ೫.೫ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವುದರ ಜತೆಗೆ ಶೇ.೧೦ರಷ್ಟು ಸಕ್ಕರೆ ಇಳುವರಿ ತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

ಕಚೇರಿ ಅಧೀಕ್ಷಕ ರಮೇಶ ಚಿದ್ರಿ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕರಾದ ಬಾಬುರಾವ ಪಾಟೀಲ್, ಬಾಬುರಾವ ತುಂಬಾ, ಶಿವಶಂಕರ ಪಾಟೀಲ್, ಲಿಯಾಕತ್ ಅಲಿ ಅಹ್ಮದ್ ಅಲಿ, ಸಂಗಾರೆಡ್ಡಿ ಸಿದ್ದಾರೆಡ್ಡಿ, ಶಂಕರ ಚವ್ಹಾಣ್, ಅಶೋಕಕುಮಾರ ಕೋಟಿ, ಬಾಬುರಾವ ಪೊಲೀಸ್ ಪಾಟೀಲ್, ಸಂಗ್ರಾಮ ಮುದ್ನಾಳೆ, ಸುರೇಖಾ ಶೆಟಕಾರ್, ನಳಿನಿ ಪಾಟೀಲ್, ವ್ಯವಸ್ಥಾಪಕ ಬಿ.ಶಿವಣ್ಣ ಇತರರಿದ್ದರು.

ಕಬ್ಬಿಗೆ ೩ ಸಾವಿರ ರೂ. ನಿಗದಿ ಪಡಿಸಿ: ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಮಲ್ಲಿಕಾರ್ಜುನ ಸ್ವಾಮಿ, ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿ ವಿವಿಧ ಭಾಗದ ರೈತರು ಮಾತನಾಡಿ, ಪ್ರತಿ ಟನ್ ಕಬ್ಬಿಗೆ ೩ ಸಾವಿರ ರೂ. ದರ ನಿಗದಿ ಪಡಿಸಬೇಕು. ಜತೆಗೆ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಪ್ರತಿ ಟನ್ ಕಬ್ಬಿಗೆ ಕನಿಷ್ಠ ೨-೫ ಕೆಜಿ ಉಚಿತ ಸಕ್ಕರೆ ವಿತರಿಸುವುದು ಸೇರಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಕಾರ್ಖಾನೆ ಅಧ್ಯಕ್ಷ ವೈಜಿನಾಥ ಪಾಟೀಲ್ ಜ್ಯಾಂತಿ ಮಾತನಾಡಿ, ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿ ರೈತರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net