ಮೀನು ಮಾರಾಟ ಫೆಡರೇಷನ್​ಗೆ 6.41 ಕೋಟಿ ರೂ. ಲಾಭ

Fedaration 1
Published on

ಸಂಸ್ಥೆಯ ಅಧ್ಯಕ್ಷ ಯಶ್​ಪಾಲ್​ ಸುವರ್ಣ ಮಾಹಿತಿ

ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಹಲವಾರು ತಾಂತ್ರಿಕ ಕಾರಣ, ಮೀನುಗಾರಿಕೆಯಲ್ಲಿ ಉಂಟಾದ ಏರಿಳಿತಗಳ ಸಮಸ್ಯೆಯ ನಡುವೆಯೂ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್​ ಲಾಭದತ್ತ ದಾಪುಗಾಲು ಹಾಕಿದೆ. ಪ್ರಸಕ್ತ ಸಾಲಿನಲ್ಲಿ 212 ಕೋಟಿ ರೂ. ವ್ಯವಹಾರದೊಂದಿಗೆ ಒಟ್ಟು 6.41 ಕೋಟಿ ರೂ. ವ್ಯಾಪಾರ ಲಾಭ ದಾಖಲಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಮಂಗಳೂರಿನ ಪಾಂಡೇಶ್ವರದ ಎಮ್ಮೆಕೆರೆಯಲ್ಲಿರುವ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಸೆಪ್ಟೆಂಬರ್​ 9ರಂದು ಆಯೋಜಿಸಿದ್ದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್​ನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಮಾದರಿ ಸಹಕಾರಿ ಸಂಸ್ಥೆ

ಕರಾವಳಿಯ ಮೀನುಗಾರರಿಗಿರುವ ಸಮಸ್ಯೆ, ಅವರ ಬೇಡಿಕೆ ಈಡೇರಿಕೆಗೆ ಹಲವು ದಶಕಗಳಿಂದ ಸ್ಪಂದಿಸುತ್ತಿದ್ದು, ಕಡಲ ಮಕ್ಕಳ ಧ್ವನಿಯಾಗಿ ಫೆಡರೇಷನ್​ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ 16 ವರ್ಷದಲ್ಲಿ ಒಟ್ಟು ರೂ. 44 ಕೋಟಿ ಲಾಭ ದಾಖಲಿಸುವ ಮೂಲಕ ಕರಾವಳಿ ಜಿಲ್ಲೆಯ ಮಾದರಿ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.

ಸಂಸ್ಥೆಯಿಂದ ಸಾಮಾಜಿಕ ಸೇವೆ

Fedaration 2
ಫೆಡರೇಷನ್​ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರತಿಭಾವಂತ ಮಕ್ಕಳಿಗೆ 25 ಲಕ್ಷ ರೂ. ಪ್ರತಿಭಾ ಪುರಸ್ಕಾರ, ಸಂಸ್ಥೆಯೊಂದಿಗೆ ವ್ಯವಹರಿಸುವ ಸದಸ್ಯ ಗ್ರಾಹಕರಿಗೆ 4 ಕೋಟಿ ರೂ. ಪ್ರೋತ್ಸಾಹಕ ಉಡುಗೊರೆ, ದೇಣಿಗೆ ಮತ್ತು ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ 20 ಲಕ್ಷ ರೂ. ಆರೋಗ್ಯನಿಧಿ ನೀಡಲಾಗಿದೆ ಎಂದು ಯಶ್​ಪಾಲ್​ ಮಾಹಿತಿ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ದರ್ಶನ್​ ಅವರು 2024-25ನೇ ಸಾಲಿನ ವರದಿ ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿ ಕಾರ್ಯ ಹಾಗೂ ನಿರಂತರ ಲಾಭದಾಯಕವಾಗಿ ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ದೇವಪ್ಪ ಕಾಂಚನ್​, ಆಡಳಿತ ಮಂಡಳಿಯ ನಿದೇರ್ಶಕರಾದ ರಾಮಚಂದ್ರ ಕುಂದರ್​, ಸುರೇಶ ಸಾಲಿಯಾನ್​, ಶಿವಾಜಿ ಅಮೀನ್​, ಸುಧೀರ ಶ್ರೀಯಾನ್​ ಹಾಗೂ ಸದಸ್ಯರು

ಉಪಸ್ಥಿತರಿದ್ದರು.

ಆರು ಜಿಲ್ಲೆಗಳ 21 ಸಂಘಗಳಿಗೆ ಆರ್ಥಿಕ ನೆರವು

ಮೀನುಗಾರರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಮತ್ಸ್ಯ ಸಂಪದಾ ಸಹಿತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೀನುಗಾರಿಕಾ ಯೋಜನೆಗಳನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು. ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಮತ್ಸ್ಯ ಸಂಪದಾ ಯೋಜನೆಯಲ್ಲಿ ನೋಡಲ್​ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಳಗಾವಿ ಜಿಲ್ಲೆಗಳ ಒಟ್ಟು 21 ಮೀನುಗಾರಿಕಾ ಸಂಘಗಳಿಗೆ ತರಬೇತಿ, ಅಧ್ಯಯನ ಪ್ರವಾಸ ಒಳಗೊಂಡಂತೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಯಶ್​ಪಾಲ್​ ತಿಳಿಸಿದರು.

ನಾಡದೋಣಿ ಮೀನುಗಾರಿಕಾ ದುರಂತದಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಫೆಡರೇಷನ್​ ನೇತೃತ್ವದಲ್ಲಿ, ವಿವಿಧ ಮೀನುಗಾರಿಕಾ ಸಹಕಾರಿ ಸಂಘ, ಮೀನುಗಾರಿಕಾ ಇಲಾಖೆಯ ಸಹಕಾರದೊಂದಿಗೆ ನಾಡದೋಣಿ ಮೀನುಗಾರರಿಗೆ ಉಚಿತವಾಗಿ ಲೈಫ್​ ಜಾಕೆಟ್​ ನೀಡಲು ನಿರ್ಧರಿಸಲಾಗಿದೆ. ಮೀನುಗಾರರಿಗೆ ಕಿಸಾನ್​ ಕ್ರೆಡಿಟ್​ ಕಾರ್ಡ್​ ಮಿತಿಯನ್ನು 3 ಲಕ್ಷ ರೂ.ಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. | ಯಶ್​ಪಾಲ್​ ಸುವರ್ಣ. ಫೆಡರೇಷನ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net