

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟ ಕಾರ್ಯಕ್ರಮ ನ೬ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಡಾ.ಪಾರ್ವತಿ ಅಪ್ಪಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೧೦ ಗಂಟೆಗೆ ಎಫ್.ಎಂ.ಕೆ.ಎಂ.ಸಿ ಕಾಲೇಜಿನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ.ಕಿಶೋರ್ ಕುಮಾರ್, ಹಳೆ ವಿದ್ಯಾರ್ಥಿ ಹಾಗೂ ಆರ್ಥೋಫೆಡಿಕ್ ಸರ್ಜನ್ ಡಾ.ರವಿ ಅಪ್ಪಾಜಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಎಂ.ಬಿ.ಎ ಮತ್ತು ಟೂರಿಸಂ ನಲ್ಲಿ ಮೊದಲ ರ‌್ಯಾಂಕ್ ಪಡೆದ ಲಿಪಿಶ್ರೀ, ಅಂತರಾಷ್ಟ್ರೀಯ ರಸಾಯನಶಾಸ್ತ್ರ ವಿಜ್ಞಾನಿಗಳ ಪಟ್ಟಿಯಲ್ಲಿ ಹೆಸರು ಪಡೆದ ಡಾ.ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ’ಕೊಡಗಿನ ಪರಿಸರದ ಮೇಲೆ ಪ್ರವಾಸೋದ್ಯಮದ ಪರಿಣಾಮಗಳು’ ಎಂಬ ವಿಷಯದ ಕುರಿತು ಕನ್ನಡ, ಹಿಂದಿ, ಇಂಗ್ಲೀಷ್‌ನಲ್ಲಿ ನಡೆಸಲಾದ ಭಾಷಣ, ಪ್ರಬಂಧ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು. ಸಂತೋಷ ಕೂಟದ ಪ್ರಯುಕ್ತ ಸಂಘದ ಸದಸ್ಯರಿಗೆ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಭೆ ನಡೆಸಲು ಹಳೇ ವಿದ್ಯಾರ್ಥಿಗಳ ಸಂಘದಿಂದ ಕೊಠಡಿ ನಿರ್ಮಾಣ ಮಾಡುವ ಯೋಜನೆ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸದಸ್ಯತ್ವ ಪಡೆದುಕೊಳ್ಳಲು ಇಚ್ಛಿಸುವವರು ನ೬ ರಂದು ಕಾರ್ಯಕ್ರಮದಲ್ಲಿ ಸದಸ್ಯತ್ವ ಪಡೆದುಕೊಳ್ಳಬಹುದು. ಅಥವಾ ೯೪೮೧೭೬೨೯೭೯ ಸಂಖ್ಯೆಗೆ ಕರೆ ಮಾಡಿ ದೂರವಾಣಿ ಮೂಲಕ ಪಡೆದುಕೊಳ್ಳಬಹುದು ಎಂದರು.
ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕಾಲೇಜಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿದ್ದು, ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಡಿ.ಚರ್ಮಣ, ನಿರ್ದೇಶಕರಾದ ಬಿ.ಎನ್.ವಿಠಲ್ ತಿಮ್ಮಯ್ಯ, ನಂದಿನೆರವಂಡ ಅಪ್ಪಯ್ಯ ಹಾಗೂ ರಾಣಿ ಮಾಚಯ್ಯ ಉಪಸ್ಥಿತರಿದ್ದರು.