ಹಿರೇಮಸಳಿಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ, ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ, ಶಿಕ್ಷಕರ ಪ್ರೇರಣಾದಾಯಕ ನುಡಿಗೆ ಮಕ್ಕಳು-ಪೋಷಕರು ಫಿದಾ

MASALI GATHERING
ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಸಿಕಂದರ್ ನಾಟಿಕಾರ, ಮನೋಜಗೌಡ ಪಾಟೀಲ, ಮಹ್ಮದ್‌ಪಟೇಲ್ ಬಗಲಿ ಮತ್ತಿತರರಿದ್ದಾರೆ.
Published on

ಇಂಡಿ: ಗುರುವಿನ ಮಾರ್ಗದರ್ಶನ, ಶ್ರದ್ಧೆಯ ಕಲಿಕೆ ಹಾಗೂ ಸತತ ಪ್ರಯತ್ನಗಳೇ ಸಾಧನೆಯ ಸೂತ್ರ ಎಂದು ತಿಂಥಣಿಯ ಸಿಆರ್‌ಪಿ ಸಿಕಂದರ್ ನಾಟಿಕಾರ ಮಾರ್ಮಿಕವಾಗಿ ನುಡಿದರು.

ತಾಲೂಕಿನ ಹಿರೇಮಸಳಿಯ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ 2024-25ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಸಾಧನೆಗೆ ಬಡತನದ ಹಂಗಿಲ್ಲ. ಬಡವ-ಶ್ರೀಮಂತ ಎಂಬ ತಾರತಮ್ಯವಿಲ್ಲ. ಅಷ್ಟೇ ಏಕೆ ಸಾಧನೆಗೆ ನಿರ್ದಿಷ್ಟ ಕ್ಷೇತ್ರವೆಂಬುದಿಲ. ಯಾರು ಬೇಕಾದರೂ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು. ಅದಕ್ಕಾಗಿ ಸ್ಪಷ್ಟ ಗುರಿ, ಶ್ರದ್ಧೆ ಹಾಗೂ ಪ್ರಾಮಾಣಿಕ ಪ್ರಯತ್ನವಿರಬೇಕೆಂದು ಪುನರುಚ್ಚರಿಸಿದರು.

ತಂದೆ-ತಾಯಿ ಋಣ ಹಾಗೂ ಗುರುವಿನ ಋಣ ತೀರಿಸಲಾಗದಂಥದ್ದು. ವಿದ್ಯಾರ್ಥಿ ಜೀವನಕ್ಕೆ ಬೆಲೆ ಕಟ್ಟಲಾಗದು. ಅದಕ್ಕಾಗಿಯೇ ಅದನ್ನು ಬಂಗಾರದ ಜೀವನ ಎಂದಿರುವುದು. ಈ ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ ರೂಢಿಸಿಕೊಳ್ಳಬೇಕು. ಹೇಗೆ ಅಯ್ಯಪ್ಪ ಸ್ವಾಮಿಯ ಭಕ್ತರು ಒಂದೊಂದೇ ಮೆಟ್ಟಿಲನ್ನೇರಿ 18 ಮೆಟ್ಟಿಲೇರಿ ಅಯ್ಯಪ್ಪನ ದಿಗ್ದರ್ಶನ ಪಡೆಯುತ್ತಾರೆಯೋ ಅದೇ ರೀತಿ ವಿದ್ಯಾರ್ಥಿ ಜೀವನದ ಒಂದೊಂದೆ ಮೆಟ್ಟಿಲನ್ನೇರಿ ಸಾಧನೆಯ ಶಿಖರ ತಲುಪಬೇಕೆಂದರು.

ತಡವಲಗಾ ಸಮುದಾಯ ಆರೋಗ್ಯ ಕೇಂದ್ರದ ನರ್ಸಿಂಗ್ ಆಫೀಸರ್ ಶಶಿಧರ ವಾಲಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆಯಿದೆ. ಅದಕ್ಕೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ. ಮಾರ್ಗದರ್ಶನದ ಅವಶ್ಯಕತೆ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಶಾಂತೇಶ್ವರ ಸಂಸ್ಥೆ ಮಕ್ಕಳ ಪ್ರತಿಭೆಗೆ ನೀರುಣಿಸಿ ಪೋಷಿಸುವ ಕೆಲಸ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪತ್ರಕರ್ತ ರಾಮು ಭಾಸಗಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಕಲಿತ ಮಕ್ಕಳು ಅಲಂಕರಿಸದ ಸರ್ಕಾರಿ ಹುದ್ದೆಗಳಿಲ್ಲ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಗೈಯುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಗೀತ, ಪತ್ರಿಕೋದ್ಯಮ, ಪೊಲೀಸ್ ಇಲಾಖೆ, ನ್ಯಾಯಾಂಗ, ಆಡಳಿತ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹೀಗೆ ಸರ್ವರಂಗಗಳಲ್ಲಿಯೂ ಸಾಧನೆ ಮೆರೆಯುತ್ತಿರುವುದಕ್ಕೆ ಶಾಂತೇಶ್ವರ ಶಾಲೆ ಶೈಕ್ಷಣಿಕ ಗುಣಮಟ್ಟವೇ ಕಾರಣ ಎಂದರು.

ಮುಖ್ಯೋಪಾಧ್ಯಾಯ ಐ.ಎಸ್. ಮಾಶ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಂತೇಶ್ವರ ಪ್ರೌಢ ಶಾಲೆಯ ಪ್ರಗತಿಯ ವಿವರ ಬಿಚ್ಚಿಟ್ಟರು.

ಎಸ್‌ಎಸ್‌ವಿವಿ ಸಂಘದ ಉಪಾಧ್ಯಕ್ಷ ನೀಲಕಂಠಗೌಡ ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮನೋಜಗೌಡ ಪಾಟೀಲ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪೀರಪ್ಪ ಹೊಸಮನಿ, ಮಹ್ಮದ್‌ಪಟೇಲ್ ಬಗಲಿ, ಶಿವಾನಂದ ಮಲಕಗೊಂಡ, ಸಿದ್ಧಾರೂಢ ಕಲ್ಲೂರ, ಅಶೋಕ ಮರಡಿ, ಪ್ರಕಾಶ ದೇವರಮನಿ, ಮಿಲಿಂದ ಹೊಸಮನಿ, ಸುಭಾಷ ಕ್ಷತ್ರಿ, ಪ್ರಕಾಶ ಭಾವಿಕಟ್ಟಿ ಪಾಲ್ಗೊಂಡಿದ್ದರು. ಸುರೇಖಾ ಭಾಗಿಕಟ್ಟಿ ನಿರೂಪಿಸಿದರು.

MASALI GATHERING 2

ಶಿಕ್ಷಕರಾದ ಬಿ.ಎಂ.ಗಾಣಿಗೇರ, ಪಿ.ಸಿ. ಗಿರಿಗೌಡರ, ಸುರೇಶ ಡೊಂಗ್ರೋಜಿ, ವಿದ್ಯಾರ್ಥಿ ಪ್ರತಿನಿಧಿ ಕಾವೇರಿ ಲಾ. ಉಪ್ಪಾರ, ಅಕ್ಷತಾ ಡೊಂಗ್ರೋಜಿ ಮತ್ತಿತರರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net