

ವಿಜಯವಾಣಿ ಸುದ್ದಿಜಾಲ ವಿಜಯಪುರ
ಪಟ್ಟಣದ ಶಿಡ್ಲಘಟ್ಟ ರಸ್ತೆಯಲ್ಲಿರುವ ದಿವ್ಯ ಬಾಲಯೇಸು ವಾರ್ಷಿಕ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.
ವಾರ್ಷಿಕೋತ್ಸವ ಅಂಗವಾಗಿ ಫೆ.1 ರಿಂದ ಕೇಂದ್ರದ ಗುರುಗಳಾದ ಆಲ್ಬನ್ ಝೋಯೋ, ಆರೋಗ್ಯನಾಥನ್, ಅಂಥೋನಿ ಡೆನಿಯಲ್ ಅವರು ಜಪಸರ, ಪಾಪನಿವೇದನೆ, ಧ್ವಜಾರೋಹಣ, ದಿವ್ಯಬಲಿಪೂಜೆ ನಡೆಸಿಕೊಟ್ಟರು.
ದೊಡ್ಡಬಳ್ಳಾಪುರದ ಸಂತ ಪೇತ್ರರ ದೇವಾಲಯದ ಧರ್ಮಗುರು ಸ್ವಾಮಿ ಅಂಥೋನಿ ಡಿಸೋಜಾ, ಪ್ರಸಾದ ಆಶೀರ್ವಚನ ಹಾಗೂ ಆಡಂಬರ ಗಾಯನ ಬಲಿಪೂಜೆ ನಡೆಸಿಕೊಟ್ಟರು. ನಂತರ 6 ಗಂಟೆಗೆ ದಿವ್ಯ ಬಾಲಯೇಸು ಪುತ್ಥಳಿ ಮೆರವಣಿಗೆ ನಡೆಯಿತು. ಕೆಂಪು ಮತ್ತು ಶ್ವೇತ ವಸ್ತ್ರದಾರಿ ಭಕ್ತರು ಶಿಲುಬೆ ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು.
ದಿವ್ಯ ಬಾಲಯೇಸು ದೇವಾಲಯದ ಧರ್ಮಗುರು ಚಾಕೋ ಮಾತನಾಡಿ, ದೇವರು ಮಾನವನನ್ನು ಸೃಷ್ಟಿ ಮಾಡಿರುವುದು ತನ್ನ ಉದ್ದೇಶ ನೆರವೇರಿಸಿಕೊಳ್ಳುಲು. ಅವರಿಂದ ಉಪಯೋಗಿಸಲ್ಪಡಲು ನಮ್ಮ ಅಂತರಂಗ ಶುದ್ಧವಾಗಿಟ್ಟುಕೊಂಡು ಸಿದ್ಧರಾಗಬೇಕಾಗಿದೆ. ನಾನು, ನನ್ನದು ಎಂಬ ವ್ಯಾಮೋಹ ಬಿಟ್ಟು ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಜೀವಿಸುವುದನ್ನು ರೂಢಿಸಿಕೊಳ್ಳಬೇಕು ಎಂಬ ಶಾಂತಿಯ ಸಂದೇಶವನ್ನು ಯೇಸುಕ್ರಿಸ್ತ ನೀಡಿದ್ದಾರೆ. ನಾವೆಲ್ಲರೂ ಅವರ ಮಾರ್ಗ ಅನುಸರಿಸುತ್ತಿದ್ದೇವೆ. ಎಲ್ಲರೊಟ್ಟಿಗೆ ಸಮಾಧಾನದಿಂದ ಬದುಕುತ್ತಿದ್ದೇವೆ ಎಂದರು.
ದೊಡ್ಡಬಳ್ಳಾಪುರದ ಸಂತ ಪೇತ್ರರ ದೇವಾಲಯದ ಧರ್ಮಗುರು ಅಂಥೋನಿ ಡಿಸೋಜಾ ಮಾತನಾಡಿ, ದೇವರನ್ನು ಹಿಂಬಾಲಿಸುವ ಪ್ರತಿಯೊಬ್ಬರೂ ತಮ್ಮನ್ನು ನಿರಾಕರಿಸಿಕೊಳ್ಳಬೇಕು. ಹುಟ್ಟು ಎಷ್ಟು ಸತ್ಯವೋ, ಸಾವು ಅಷ್ಟೇ ಸತ್ಯ. ಹುಟ್ಟು, ಸಾವಿನ ನಡುವೆ ಇರುವ ಬದುಕನ್ನು ಸುಂದರವನ್ನಾಗಿಸಿಕೊಂಡು ಸರ್ವರಿಗೂ ಉಪಕಾರ ಮಾಡುವ ಗುಣ ಬೆಳೆಸಿಕೊಂಡು ನಾವು ನಮ್ಮ ಪಯಣ ಸಾಗಿಸಬೇಕಾಗಿದೆ. ಪ್ರತಿಯೊಬ್ಬರಲ್ಲಿರುವ ದೇವರ ಆತ್ಮಕ್ಕೆ ನಾವೆಲ್ಲರೂ ಗೌರವಿಸಬೇಕಾಗಿದೆ. ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.