

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮದ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 2024-25ನೇ ಸಾಲಿನ ಕೋಳಿ ಹಾಗೂ ಮಾಂಸದ ಅಂಗಡಿಗಳ ಠೇವಣಿ ಸೇರಿದಂತೆ ಸಂತೆ ಸುಂಕದ ಬಹಿರಂಗ ಹರಾಜು ಪ್ರಕ್ರಿಯೆ ಬುಧವಾರ ನಡೆಯಿತು.
ಏ.1ರಿಂದ 2025ರ ಮಾರ್ಚ್ 31ರವರೆಗಿನ ಕಾಲಾವಧಿಗೆ ಹರಾಜು ಪ್ರಕ್ರಿಯೆ ನಡೆಯಿತು. ಗ್ರಾಪಂ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಈ ಹರಾಜು ನಡೆಯಿತು.
ಸಂತೆ ಸುಂಕದ ಹರಾಜು ಸರ್ಕಾರಿ ಸವಾಲು 1 ಲಕ್ಷ ರೂ. ಆಗಿದ್ದು 20 ಸಾವಿರ ರೂ.ನಿಂದ ಆರಂಭಗೊಂಡಿತು. ಅಂತಿಮವಾಗಿ 70 ಸಾವಿರ ರೂ.ಗೆ ನರಿಹಳ್ಳಿ ಗ್ರಾಮದ ನಂಜೇಗೌಡ ಅವರಿಗೆ ಹರಾಜು ದಕ್ಕಿತು. ಕಳೆದ ವರ್ಷ 1,27,600 ರೂ.ಗೆ ಸಂತೆ ಸುಂಕ ಹರಾಜಾಗಿತ್ತು. ಆದರೆ ವಾರದಿಂದ ವಾರಕ್ಕೆ ಸಂತೆಗೆ ವ್ಯಾಪಾರಸ್ಥರು ಸೇರುತ್ತಿರುವುದು ಕಡಿಮೆಯಾಗುತ್ತಿರುವ ಕಾರಣ ಈ ಬಾರಿ ಯಾರೂ ಹರಾಜು ಕೂಗಲು ಮುಂದಾಗದೆ ನಿರುತ್ಸಾಹ ತೋರಿದರು.
3 ಕೋಳಿ ಅಂಗಡಿಗಳು ತಲಾ 5 ಸಾವಿರ ರೂ., ದಿನವಹಿ ಮಾಂಸ ಮಾರಾಟದ 2 ಅಂಗಡಿಗಳು ಒಟ್ಟು 16,500 ರೂ., ವಾರದ 2 ಮಾಂಸದಂಗಡಿಗಳು ಒಟ್ಟು 23,000 ರೂ. ಹಾಗೂ ಹಂದಿ ಮಾಂಸದ 2 ಅಂಗಡಿಗಳಿಂದ ಒಟ್ಟು 11,500 ರೂ. ಗೆ ಹರಾಜುಗೊಂಡಿತು.
ಬಳಿಕ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ರವಿ, ಎಚ್.ಕೆ.ಸುಧಾಕರ್, ಆನಂದ್, ಸೌಮ್ಯ ಗವೀಶ್, ಚಂದ್ರಹಾಸ್, ಪಿಡಿಒ ಕೆ.ಎಸ್.ಪ್ರಕಾಶ್, ಲೆಕ್ಕ ಸಹಾಯಕ ಚಂದ್ರೇಗೌಡ, ಕರ ವಸೂಲಿಗಾರ ಕೃಷ್ಣೇಗೌಡ, ಸಿಬ್ಬಂದಿ ಆನಂದ್, ಜ್ಯೋತಿ, ಅಂಗಡಿ ಮಾಲೀಕರು, ನೀರ‌್ಗಂಟಿಗಳು, ಸಾರ್ವಜನಿಕರು ಹಾಗೂ ಇತರರು ಇದ್ದರು.