

ಹುಬ್ಬಳ್ಳಿ: ಇಂದಿನ ದಿನಮಾನದಲ್ಲಿ ಎಲ್ಲವೂ ತ್ವರಿತವಾಗಿ ಬದಲಾಗುತ್ತಿರುವುದರಿಂದ ಕಾಲಕ್ಕೆ ತಕ್ಕಂತೆ ಜ್ಞಾನ ಸಂಪಾದನೆ ಬಹಳ ಮುಖ್ಯ ಎಂದು ಡಾ. ಶಂಕರ ಬಿಜಾಪುರ ಹೇಳಿದರು.
ನಗರದ ಚೇತನ ಬಿಜಿನೆಸ್ ಸ್ಕೂಲ್ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಒಂದು ಕೋರ್ಸ್ ಪೂರ್ಣಗೊಳಿಸಿದ ಮೇಲೆ ಕಲಿಕೆ ಮುಗಿಯಿತು ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಇದು ಕಲಿಕೆಯ ಔಪಚಾರಿಕತೆ ಪೂರ್ಣಗೊಳಿಸಿದಂತೆ. ಪ್ರತಿಯೊಬ್ಬರಲ್ಲೂ ಉತ್ಕೃಷ್ಟ ಸಾಮರ್ಥ್ಯ ಇರುತ್ತದೆ. ಕೆಲವರು ವೇಗವಾಗಿ ಕಲಿಯಬಹುದು. ಕೆಲವರು ನಿಧಾನವಾಗಿ ಕಲಿಯುತ್ತಾರೆ. ಇದು ಕಲಿಕೆಯ ವಿಭಿನ್ನ ಮಾರ್ಗಗಳಾಗಿವೆಯೇ ಹೊರತು ಸಮಸ್ಯೆಯೇನೂ ಅಲ್ಲ ಎಂದರು.
ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಇಂದು ಎಲ್ಲ ವೃತ್ತಿಗಳಲ್ಲೂ ಮ್ಯಾನೇಜಮೆಂಟ್ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತಿದೆ. ತಾಂತ್ರಿಕ ಶಿಕ್ಷಣಕ್ಕಿಂತ ಎಂಬಿಎ ಪದವೀಧರರು ಮ್ಯಾನೇಜಮೆಂಟ್ ಕೌಶಲದಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿದ್ದಾರೆ.
ಸಂಸ್ಥೆಯ ನಿರ್ದೇಶಕ ಎಂ.ವಿ. ಕೊರವಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ರಾಜಣ್ಣ ಕೊರವಿ, ಚೇರ್ಮನ್ ಪ್ರೊ. ಜಗದೀಶ ದ್ಯಾವಪ್ಪನವರ್, ಇತರರು ಇದ್ದರು. ಪ್ರೊ. ರಮಾಕಾಂತ ಕುಲಕರ್ಣಿ ಪರಿಚಯಿಸಿದರು. ವಿದ್ಯಾರ್ಥಿಗಳು ನೃತ್ಯ, ನಾಟಕ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.