

ಕೆ.ಎಂ.ದೊಡ್ಡಿ: ‘ಮಹಾಭಾರತ ದೃಶ್ಯದ ಶಕ್ತಿ ಇದು-ಭಕ್ತಿ ಇದು’ ಎಂಬ ಶೀರ್ಷಿಕೆಯಡಿ ಸಮೀಪದ ಮೆಣಸಗೆರೆ ಗ್ರಾಮದಲ್ಲಿನ ಜ್ಞಾನ ಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ವಾರ್ಷಿಕೋತ್ಸ ಆಚರಿಸಲಾಯಿತು.
ಪಾಂಡವರು ಮತ್ತು ಕೌರವರು ಗುರುಕುಲದಲ್ಲಿನ ಕಥನವನ್ನು ಮಕ್ಕಳು ಉತ್ತಮವಾಗಿ ಪ್ರಸ್ತುತಪಡಿಸಿ ಸೈ ಎನಿಸಿಕೊಂಡರು. ಅರ್ಜುನ್ ರೆಬಲ್ ಡಾನ್ ಸ್ಟುಡಿಯೋದ ನೃತ್ಯ ಸಂಯೋಜಕ ಅರ್ಜುನ್ ರಾಕಿ ನಿರ್ದೇಶನದ ಮಲೈ ಮಹದೇಶ್ವರ ಹಾಡಿಗೆ ಮಕ್ಕಳ ನೃತ್ಯ ಗಮನ ಸೆಳೆಯಿತು.
ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಟಿ.ಶಿವರಾಮು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರು ತಮ್ಮ ಸ್ವಭಾವವನ್ನು ಮಕ್ಕಳ ಮುಂದೆ ಹೇಗೆ ಪ್ರದರ್ಶಿಸುತ್ತಾರೋ ಹಾಗೆಯೇ ಮಕ್ಕಳ ಬೆಳವಣಿಗೆ ಆಗುತ್ತದೆ. ಹಾಗಾಗಿ ಮಕ್ಕಳ ಮುಂದೆ ಪಾಲಕರು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.
ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದ ಪ್ರಾಧ್ಯಾಪಕಿ ಡಾ.ಟಿ.ಕೆ.ಶಶಿಕಲಾ ಮಾತನಾಡಿ, ಮಕ್ಕಳು ಟಿವಿ ಮತ್ತು ಮೊಬೈಲ್‌ಗಳಿಗೆ ದಾಸರಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಪಾಲಕರು ಎಚ್ಚರ ವಹಿಸಬೇಕು ಎಂದರು.
ಶಾಲೆಯ ಅಧ್ಯಕ್ಷೆ ಡಾ.ಸೌಮ್ಯಾ ರಾಜೇಶ್ ಮಾತನಾಡಿ, ಪಾಲಕರು ಶಾಲೆಯ ನಿಯಮಗಳನ್ನು ಪಾಲಿಸುವ ಮೂಲಕ ಶಿಸ್ತಿಗೆ ಆದ್ಯತೆ ನೀಡಬೇಕು. ಆಗ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.
ಜಿಲ್ಲಾ ಉಪನಿರ್ದೇಶಕ ಶಿವರಾಮೇಗೌಡ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ಕಾಳೀರಯ್ಯ, ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿ ತೇಜಸ್ವಿನಿ ತಿಪ್ಪರೇಗೌಡ, ಚೇರ್ಮನ್ ಪ್ರಭಾವತಿ ಸುರೇಶ್, ಮುಖ್ಯ ಶಿಕ್ಷಕಿ ಶ್ರುತಿ ಇತರರಿದ್ದರು.