ಕ್ಷೇತ್ರದ ಏಳ್ಗೆಗೆ ಕಾಯಕಯೋಗಿ ಶ್ರಮ

swamiji
ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಶ್ರೀವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದ 14ನೇ ವಾರ್ಷಿಕ ಸ್ಮರಣೋತ್ಸವದಲ್ಲಿ ಶಿವಗಂಗೆ ಹೊನ್ನಮ್ಮ ಗವಿಮಠ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಪುರಾತನವಾದ ಶ್ರೀವನಕಲ್ಲು ಮಲ್ಲೇಶ್ವರ ಕ್ಷೇತ್ರದ ಏಳ್ಗೆಗೆ ಲಿಂಗೈಕ್ಯ ಕಾಯಕಯೋಗಿ ಶ್ರೀ ಸಿದ್ದ ಯೋಗಾನಂದ ಸ್ವಾಮೀಜಿ ಬಹಳ ಶ್ರಮಿಸಿದ್ದರು ಎಂದು ಶಿವಗಂಗೆ ಹೊನ್ನಮ್ಮ ಗವಿಮಠ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಂಪುರ ಹೋಬಳಿಯ ಶ್ರೀವನಕಲ್ಲು ಮಲ್ಲೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ 14ನೇ ವಾರ್ಷಿಕ ಸ್ಮರಣೋತ್ಸವದಲ್ಲಿ ಮಾತನಾಡಿದರು.
ಮಠಕ್ಕೆ ಯಾವುದೇ ದೊಡ್ಡ ಆಸ್ತಿ ಇಲ್ಲದಿದ್ದರೂ ನೂರಾರು ಅನಾಥ ಮಕ್ಕಳು, ವಯೋವೃದ್ಧರು, 80ಕ್ಕೂ ಹೆಚ್ಚು ಗೋವುಗಳನ್ನು ಸಲಹುತ್ತಾ ಬರಲಾಗುತ್ತಿದೆ. ಸಿದ್ಧ ಯೋಗಾನಂದ ಶ್ರೀಗಳು ಅನಾಥಾಶ್ರಮವನ್ನು ಪ್ರಾರಂಭಿಸಿ ಮಕ್ಕಳನ್ನು ಪಾಲನೆ ಮಾಡುವಲ್ಲಿ ಅವಿತರ ಶ್ರಮಿಸಿದ್ದರು ಎಂದರು. ಪೂಜ್ಯರು ಕಾಯಕದ ಮೂಲಕ ಮಠವನ್ನು ನಿರ್ಮಿಸಿದ್ದಾರೆ ಎಂದರು. ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸರ್ವ ಸಮುದಾಯದವರನ್ನು ಸೇರಿಸಿಕೊಂಡು ಮಠವನ್ನು ಮುನ್ನಡೆಸಿಕೊಂಡು ಬಂದಿರುವ ಹಿರಿಯ ಶ್ರೀಗಳ ಸಾಧನೆ ಸಾರ್ಥಕವೆನಿಸುತ್ತಿದೆ. ಹಿರಿಯ ಶ್ರೀಗಳ ಅಣತೆಯಂತೆ, ಡಾ.ಶ್ರೀಬಸವ ರಮಾನಂದ ಸ್ವಾಮೀಜಿ ಎಲ್ಲ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಶ್ರೀಗಳ ಬದುಕು ಆದರ್ಶ: ಸಿದ್ಧ ಯೋಗಾನಂದ ಶ್ರೀಗಳ ಬದುಕು ನಮಗೆ ಆದರ್ಶವಾಗಿದೆ ಎಂದು ಡಾ. ಶ್ರಿಬಸವ ರಮಾನಂದ ಸ್ವಾಮೀಜಿ ಹೇಳಿದರು. ಈ ಮಠವನ್ನು ಕಟ್ಟಲು ಪೂಜ್ಯರು ಪಟ್ಟ ಶ್ರಮ ಬಹಳ. ಸಿದ್ಧಗಂಗಾ ಪೂಜ್ಯರ ಹಾಗೆ, ರಾತ್ರಿ-ಹಗಲು ಎನ್ನದೆ ಸಿದ್ದ ಯೋಗಾನಂದ ಸ್ವಾಮೀಜಿ ಮಠವನ್ನು ಕಟ್ಟಿದ್ದಾರೆ. ಅವರು ಭಕ್ತರೊಂದಿಗೆ ಹಂಚಿಕೊಂಡ ವಿಚಾರಗಳನ್ನೆಲ್ಲ ಪೂರ್ಣಗೊಳಿಸುವ ನಿಟ್ಟಿನಲ್ಲಿ ಟ್ರಸ್ಟ್ ಸದಸ್ಯರು ಸಮಸ್ತ ಭಕ್ತರು ಕೈಜೋಡಿಸುವುದರ ಮೂಲಕ ಅನಾಥರಿಗೆ ಆಶ್ರಯವಾಗಿದೆ. ಶ್ರೀ ಕ್ಷೇತ್ರ, ಪೂಜ್ಯರ ಸಂಕಲ್ಪದಂತೆ ಮುಂದಿನ ದಿನಗಳಲ್ಲಿ ಆಯುರ್ವೇದಕ್ಕೆ ಸಂಬಂಧಪಟ್ಟ ಆಸ್ಪತ್ರೆಗಳನ್ನೂ ತೆರೆಯಲು ಪ್ರಯತ್ನಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net