

ರಾಯಚೂರು ವಿವಿಧ ಇಲಾಖೆಗಳ ಮೆಟ್ರಿಕ್ ಪೂರ್ವ,ಪದವಿ ಪೂರ್ವ ಮತ್ತು ನಂತರದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ತಕ್ಕಂತೆ ಬೆಡ್ ಮತ್ತು ಕಾಟ್ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಕೂಡಲೇ ಅಗತ್ಯ ಕ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ 2025-26ನೇ ಸಾಲಿನ ಜಿಪಂನ ಜಿಲ್ಲಾ ವಲಯ ಕಾರ್ಯಕ್ರಮಗಳ ವಾರ್ಷಿಕ ಕ್ರಿಯಾ ಯೋಜನೆಗಳ ಪರಿಶೀಲನೆ ಮತ್ತು ಅನುಮೋದನೆ ನೀಡುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೃತ್ತಿಪರ ಕೋರ್ಸ್‌ಗಳ ವಸತಿ ನಿಲಯಗಳು ಸೇರಿದಂತೆ ಜಿಲ್ಲೆಯಲ್ಲಿ ಇಲಾಖೆವಾರು ಇರುವ ವಸತಿ ನಿಲಯಗಳು, ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆ, ಮೂಲಭೂತ ಸೌಕರ್ಯದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕಾರ್ಯದರ್ಶಿಗಳು, ಕ್ಷೇತ್ರ ಭೇಟಿ ವೇಳೆ ಬಿಸಿಎಂ ಇಲಾಖೆಯ ಅಧೀನದ ಕೆಲವು ವಸತಿ ನಿಲಯಗಳಲ್ಲಿ ಕಾಟ್ ಮತ್ತು ಬೆಡ್ ಇಲ್ಲದಿರುವುದರ ಬಗ್ಗೆ ಖುದ್ದು ವೀಕ್ಷಣೆ ಮಾಡಿ ಗಮನಿಸಿದ್ದೇನೆ. ಇದಕ್ಕಾಗಿ ಅನುದಾನ ಮೀಸಲಿರಿಸಿ ಟೆಂಡರ ಪ್ರಕ್ರಿಯೆ ನಡೆಸಿ ಕೂಡಲೇ ವ್ಯವಸ್ಥೆ ಮಾಡಬೇಕು.
ಕಾಟಗಳು ಇಲ್ಲದೇ ಚಾಪೆ ಮೇಲೆ ಮಕ್ಕಳು ಮಲಗದಂತೆ, ಎಲ್ಲ ಮೂಲಸೌಕರ್ಯಗಳು ಲಭ್ಯವಾಗುವ ಹಾಗೆ ವಸತಿ ನಿಲಯಗಳ ಮೇಲೆ ಸೂಕ್ತ ಮೇಲ್ವಿಚಾರಣೆ ನಡೆಸಬೇಕು ಎಂದು ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೆ ಕಾರ್ಯದರ್ಶಿಗಳು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರಾಜ್ಯದ ಯಾವುದೇ ಕಡೆಗಳಲ್ಲಿ ಗರ್ಭಿಣಿಯರು ಮತ್ತು ಶಿಶುಗಳು ಮರಣ ಆಗದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಸಿಎಂ ಸೂಚನೆಯಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮುದಾಯ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಗರ್ಭೀಣಿಯರ ಮತ್ತು ಶಿಶು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ನಿರ್ಲಕ್ಷ್ಯ ಮಾಡಬಾರದು. ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಗರ್ಭಿಣಿಯರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿಯರ ಮರಣ ಪ್ರಕರಣಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷ ತಜ್ಞವೈದ್ಯರ ತಂಡವೊಂದು ಈ ಬಗ್ಗೆ ನಿಗಾವಹಿಸಿ ಕಾರ್ಯನಿರ್ವಹಿಸುತ್ತಿದೆ. ತುರ್ತು ಚಿಕಿತ್ಸೆ ಅವಶ್ಯಕತೆ ಕಾಣಿಸುವ ಗರ್ಭಿಣಿಯರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಕ್ರಮವಹಿಸಲಾಗುತ್ತಿದೆ. ತಾಯಂದಿರ ಮರಣ ತಡೆಗೆ ಸಂಬಅಧಿಸಿದಅತೆ ನರ್ಸಗಳಿಗೆ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಸಿಎಸ್‌ಆರ್ ಫಂಡ್‌ನಲ್ಲಿ 8 ಡಯಾಲಿಸಿಸ್ ಮಸೀನ್ ಖರೀದಿಸಲಾಗಿದೆ.
ತಾಯಂದಿರ ಮರಣ ತಗ್ಗಿಸುವ ಭಾಗವಾಗಿ ಉಪ ಕೇಂದ್ರಗಳಲ್ಲಿ ಈಗಾಗಲೇ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಪಿ ಎಂ. ಪುಟ್ಟಮಾದಯ್ಯ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಎಸಿ ಗಜಾನನ ಬಾಳೆ, ಜಿಪಂ ಯೋಜನಾಧಿಕಾರಿ ಡಾ.ಟಿ.ರೋಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.