ತಡವಾಗಿ ಆದ್ಯತೆಗೊಂಡ ತಾಡವೋಲೆ...

Vole-1
Published on

ಪ್ರಾಚೀನ ಗ್ರಂಥಕ್ಕೆ ನಿರ್ಮಲ ಸಂರಕ್ಷಣೆ

ಪುತ್ತಿಗೆ ಮಠದ ಮನವಿಗೆ ದ್ರೌಪದಿ ಮಣೆ

ಪ್ರಶಾಂತ ಭಾಗ್ವತ, ಉಡುಪಿ

ಭಾರತದ ಅನೇಕ ಪ್ರಾಚೀನ ನೈಜ ಸಂಪತ್ತು ನಶಿಸಿ ಹೋಗಿದ್ದು ಅವುಗಳಲ್ಲಿ ಸಹಸ್ರ ಶತಮಾನ ಪುರಾತನವಾದ ತಾಡವೋಲೆ ಗ್ರಂಥಗಳೂ ಅತ್ಯಂತ ಪ್ರಮುಖವಾಗಿದೆ. ದೇಶದ ಧರ್ಮ, ಜ್ಞಾನ, ಸನಾತನ ಜೀವನ ಶೈಲಿ, ಸಂಸ್ಕೃತಿ ಹಾಗೂ ಭಾರತೀಯತೆಯ ಪ್ರತೀಕವಾಗಿರುವ ಲಕ್ಷಾಂತರ ಸಂಖ್ಯೆಯ ಗ್ರಂಥಗಳು ಸುರಕ್ಷತೆಯಿಲ್ಲದೆ ವಿನಾಶದ ಅಂಚಿನಲ್ಲಿದೆ.

ದೇಶದ ಅಸ್ಮಿತೆಯ ಕುರುಹಾದ, ಅತ್ಯಂತ ಶ್ರೇಷ್ಠವಾದ ಗ್ರಂಥಗಳ ರಕ್ಷಣೆಗೆ ಕೇಂದ್ರ ಸರ್ಕಾರ ಆಸಕ್ತಿ ತಳೆದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಬಜೆಟ್​ನಲ್ಲಿ ದೇಶದ ತಾಡವೋಲೆ ಗ್ರಂಥಗಳ ಸಂರಕ್ಷಣೆ ಮಾಡುವುದಾಗಿ ಘೋಷಿಸಿದ್ದು, ಅನುದಾನವನ್ನೂ ಮೀಸಲಿಟ್ಟಿದ್ದಾರೆ.

Vole-2

ಪುತ್ತಿಗೆ ಮಠದಿಂದ ಮನವಿ

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವ ವಿಶ್ವ ವಿದ್ಯಾಲಯಗಳು ಭಾರತದ ಅತಿದೊಡ್ಡ ಸಂಪತ್ತಾದ, ಜ್ಞಾನ ಭಂಡಾರವಾದ ಹಸ್ತಪ್ರತಿ (ತಾಡವೋಲೆ)ಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ಸಂರಕ್ಷಿಸಿಕೊಂಡಿವೆ. ಭಾರತದಲ್ಲಿಯೂ ಸಹ ಅನೇಕ ವಿವಿಗಳು ಹಾಗೂ ಮಠ-ಮಾನ್ಯಗಳು ಪ್ರಾಚೀನ ಗ್ರಂಥಗಳ ಸಂರಕ್ಷಣೆ ಮಾಡಿವೆ. ಆದರೂ ಲಕ್ಷಾಂತರ ಗ್ರಂಥಗಳು ನಾಶವಾಗುತ್ತಿದ್ದು, ಅವುಗಳ ಸಂರಕ್ಷಣೆಯಾದರೆ ದೇಶಕ್ಕೆ, ನಮ್ಮ ಮೂಲಕ ವಿಶ್ವಕ್ಕೆ ಶುದ್ಧ ಪಾಠ ಲಭಿಸುತ್ತದೆ. ಅವುಗಳ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಹಾಗೂ ಆರ್ಥಿಕ ನೆರವು ಕೊಡಿಸುವಂತೆ 8 ತಿಂಗಳ ಹಿಂದೆ ಪುತ್ತಿಗೆ ಮಠದ ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನ ಹಾಗೂ ಒರಿಸ್ಸಾದ ಲೋಕಭಾಷಾ ಪ್ರಚಾರ ಸಮಿತಿ ವತಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲಾಗಿತ್ತು.

ರಾಷ್ಟ್ರಪತಿ ಮುರ್ಮು ಸ್ಪಂದನೆ

Manuscript-1
ಅಂದು ಮನವಿ ಸ್ವೀಕರಿಸಿ ಸ್ಪಂದಿಸಿದ್ದ ರಾಷ್ಟ್ರಪತಿ ಮುರ್ಮು, 'ನಾನೂ ಸಹ 10ನೇ ತರಗತಿ ವರೆಗೆ ಸಂಸ್ಕೃತ ಭಾಷೆ ಕಲಿತಿದ್ದೇನೆ. ತಮ್ಮ ಬೇಡಿಕೆ ಸೂಕ್ತವಾಗಿದೆ. ತಾಡವೋಲೆ ಗ್ರಂಥಗಳು ಭಾರತದ ಆಸ್ತಿಯಾಗಿದ್ದು, ಮುಂದಿನ ಬಜೆಟ್​ನಲ್ಲಿ ಅವುಗಳ ರಕ್ಷಣೆಗೆ ಕ್ರಮ ವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರುತ್ತೇನೆ' ಎಂದು ಭರವಸೆ ನೀಡಿದ್ದರು. ರಾಷ್ಟ್ರಪತಿಯ ಅಂದಿನ ಭರವಸೆ ನಿರ್ಮಲಾ ಸೀತಾರಾಮನ್​ ಅವರ ಬಜೆಟ್​ನಲ್ಲಿ ಸಾಕ್ಷಾತ್ಕಾರಗೊಂಡಿದೆ. ಹಸ್ತಪ್ರತಿಗಳ ಸಂರಕ್ಷಣೆಗೆ ಬಹುಮೊತ್ತವನ್ನೂ ಘೋಷಿಸಲಾಗಿದೆ.

ಕ್ರಮ ಕೈಗೊಂಡಿದ್ದ ಅಟಲ್​ ಜೀ

atal-bihari-vajpayee
ಅಟಲ್​ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ 2003ರಲ್ಲಿ ತಾಡವೋಲೆ ಗ್ರಂಥಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದರು. ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿ ನ್ಯಾಷನಲ್​ ಮಿಷನ್​ ಫಾರ್​ ಮ್ಯಾನ್ಯುಸ್ಕ್ರಿಪ್ಟ್​ (ಎನ್​ಎಂಎಂ) ಎಂಬ ಪ್ರತ್ಯೇಕ ವಿಭಾಗ ಸ್ಥಾಪಿಸಿದ್ದರು. ಎನ್​ಎಂಎಂ ವಿಭಾಗವನ್ನು ನಮಾಮಿ ಎಂದೂ ಹೆಸರಿಸಿದ್ದರು. ಅಂದಿನಿಂದಲೇ ಕೇಂದ್ರ ಸರ್ಕಾರದ ಅಧೀನದಲ್ಲಿ ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನವೂ ಸಹ ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿತ್ತು.

ಋಷಿ-ಮುನಿಗಳಿಂದ ಜ್ಞಾನ ಕೊಡುಗೆ

Vole-5
Vole-3
ಋಷಿ-ಮುನಿಗಳು ತಾಳೆಮರದ ಎಲೆಗಳನ್ನು ಸಂಸ್ಕರಿಸಿ ಅದರ ಮೇಲೆ ಕತ್ತರಿ ಮಾದರಿಯ (ಪೆನ್ನಿನಂತೆ), ಮರದಿಂದ ತಯಾರಿಸಿದ ವಸ್ತುವಿನಿಂದ ಅಕ್ಷರ ಕೆತ್ತುವ, ಗೀಚುವ, ಚಿತ್ರಿಸುವ, ಪ್ರಯಾಸದ ಕಾರ್ಯ ಮಾಡುತ್ತಿದ್ದರು. ಅದಕ್ಕಾಗಿ ರಾಜಾಶ್ರಯದಲ್ಲಿ ಅನೇಕ ವಿದ್ವಾಂಸರ ನೇತೃತ್ವದಲ್ಲಿ ಗ್ರಂಥ ರಚನೆ, ಗ್ರಂಥ ರಕ್ಷಣಾ ಕೆಲಸವೂ ನಡೆಯುತ್ತಿತ್ತು. ಅಂದಿನ ಎಲ್ಲ ಗ್ರಂಥಗಳ ಕೊನೆಯಲ್ಲಿ 'ಕಷ್ಟೇನ ಲಿಖಿತಂ ಗ್ರಂಥಂ ಯತ್ನೇನ ಪರಿಪಾಲಯೇತ್​' (ಕಷ್ಟದಿಂದ ಬರೆದ ಈ ಗ್ರಂಥವನ್ನು ಯತ್ನಪೂರ್ವಕ ರಕ್ಷಿಸಿ), 'ಮೂರ್ಖ ಹಸ್ತೇ ನ ದಾತವ್ಯಂ' (ಮೂರ್ಖರ ಕೈಗೆ ಇದನ್ನು ಕೊಡಬೇಡಿ) ಎಂದೂ, ಗ್ರಂಥ ನಾಶ ಮಾಡಿದರೆ ವಂಶ ನಾಶವಾಗುವ ಶಾಪದ ಉಲ್ಲೇಖವೂ ಇರುತ್ತಿತ್ತು. ಈ ಬಗೆಯಲ್ಲಿ ದೇಶಕ್ಕೆ ಕೊಡುಗೆ, ಜ್ಞಾನ ರಕ್ಷಣೆ ನಡೆದಿತ್ತು ಎಂದು ಶ್ರೀ ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬಿ.ಗೋಪಾಲ ಆಚಾರ್ಯ ವಿಜಯವಾಣಿಗೆ ತಿಳಿಸಿದ್ದಾರೆ.

ನಮ್ಮ ಮನವಿ ಪುರಸ್ಕರಿಸಿ ತಾಡವೋಲೆ ಗ್ರಂಥ ರಕ್ಷಣೆಗೆ ಕೇಂದ್ರ ಸರ್ಕಾರದ ಗಮನ ಸೆಳೆದು, ಆ ನಿಟ್ಟಿನಲ್ಲಿ ಕ್ರಮ ಕೈಗೊಂಡ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ, ದೇಶದ ಆಸ್ತಿ ರಕ್ಷಿಸಲು ಮುಂದಾದ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಅವರೆಲ್ಲರಿಗೂ ಉಡುಪಿ ಶ್ರೀಕೃಷ್ಣ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net