

* 450 ಉಪ ಗ್ರಾಮಗಳ ರಚನೆ
* ಹಕ್ಕು ಪತ್ರ ವಿತರಣೆಗೂ ಕ್ರಮ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಂದಾಯ ಗ್ರಾಮಗಳ ಘೋಷಣೆ ಹಗ್ಗ ಜಗ್ಗಾಟ ಕೊನೆಗೊಂಡಿದ್ದು, ಜಿಲ್ಲೆಯ 44 ಗ್ರಾಮಗಳು ಕಂದಾಯ ಗ್ರಾಮಗಳಾಗಿ ಸರ್ಕಾರದಿಂದ ಅಧಿಕೃತ ಘೋಷಣೆ ಆಗಿವೆ.
ಮೂಲ ದಾಖಲೆಗಳಲ್ಲಿ ತಮ್ಮೂರಿನ ಹೆಸರಿಲ್ಲದೇ ಪಕ್ಕದ ದೊಡ್ಡ ಗ್ರಾಮದ ದಾಖಲೆಗಳನ್ನು ಹೊಂದಿರುವ ಗ್ರಾಮಗಳು ಜಿಲ್ಲೆಯಲ್ಲಿದ್ದು, ತಮ್ಮದೇ ಊರಿನ ಹೆಸರಲ್ಲಿ ದಾಖಲೆಗಳು ಬರಬೇಕೆನ್ನುವ ಬೇಡಿಕೆ ಸಾಕಷ್ಟು ಇತ್ತು. ಪ್ರಥಮ ಹಂತದಲ್ಲಿ ಜಿಲ್ಲೆಯ 44 ಗ್ರಾಮಗಳಿಗೆ ಮೂಲ ಕಂದಾಯ ಗ್ರಾಮಗಳಿಂದ ಪ್ರಸ್ತಾಪಿತ ಹೊಸ ಕಂದಾಯ ಗ್ರಾಮಗಳ ದಾಖಲೆ ಒದಗಿಸಿ, ಆ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ.
ಈ ಗ್ರಾಮಗಳು ಅಸ್ತಿತ್ವದಲ್ಲಿದ್ದರೂ ಅವು ಕಂದಾಯ ಗ್ರಾಮಗಳಾಗಿರಲಿಲ್ಲ. ಗ್ರಾಮದ ಹೆಸರು ಇದ್ದರೂ, ಜಮೀನು, ಮನೆ ಇತ್ಯಾದಿ ದಾಖಲೆಗಳು ಪಕ್ಕದ ಗ್ರಾಮದ ಹೆಸರಿನಲ್ಲೇ ಇದ್ದವು. ಅಂತಹ ಗ್ರಾಮಗಳನ್ನು ಗುರುತಿಸಿ, ಪ್ರತ್ಯೇಕ ಕಂದಾಯ ಗ್ರಾಮಗಳನ್ನಾಗಿ ರಚಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಜನವಸತಿಯಿದ್ದರೂ ಗ್ರಾಮಗಳೆಂಬ ಮಾನ್ಯತೆ ಇಲ್ಲದ ಕಾರಣ, ಹಲವು ಹಳ್ಳಿಗಳಿಗೆ ಸರ್ಕಾರದ ವಿವಿಧ ಸೌಕರ್ಯಗಳು ತಲುಪುತ್ತಿರಲಿಲ್ಲ. ಗ್ರಾಮಸ್ಥರಿಗೆ ತಮ್ಮ ವಾಸಸ್ಥಳದ ಹಕ್ಕುಪತ್ರಗಳನ್ನು ಪಡೆಯಲೂ ತೊಡಕಾಗಿತ್ತು. ಹಾಗಾಗಿ ತಮ್ಮ ಪ್ರದೇಶಗಳನ್ನೂ ಕಂದಾಯ ಗ್ರಾಮಗಳೆಂದು ಪರಿಗಣಿಸುವಂತೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗುತ್ತಲೇ ಇದ್ದವು.
ಸರ್ಕಾರದ ಸುತ್ತೋಲೆ ಪ್ರಕಾರ, ಕನಿಷ್ಠ 10 ಮನೆಗಳಿರುವ ನಿರ್ದಿಷ್ಟ ಪ್ರದೇಶವನ್ನು ಕಂದಾಯ ಗ್ರಾಮವೆಂದು ಘೋಷಿಸಲು ಅವಕಾಶವಿದೆ. ಅಂತೆಯೇ, ಕನಿಷ್ಠ 50 ಜನಸಂಖ್ಯೆಯಿರುವ ಪ್ರದೇಶವನ್ನು ಪರಿಗಣಿಸಬಹುದು. ಈ ರೀತಿ ಪರಿವರ್ತನೆಯಾದ ಗ್ರಾಮಗಳ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಕಲಂ 94 ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ.
ಇಂತಹ ಅನುಕೂಲಗಳು ಜನತೆಗೆ ಕಂದಾಯ ಗ್ರಾಮ ಘೋಷಣೆಯಿಂದ ದೊರೆಯಲಿದೆ. ಹೊಸ ಕಂದಾಯ ಗ್ರಾಮಗಳನ್ನು ರಚಿಸುವ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿದೆ. ಕಂದಾಯ ಗ್ರಾಮಗಳೆಂದು ಘೋಷಿಸಬೇಕಿರುವ ಜನವಸತಿ ಪ್ರದೇಶಗಳ ಸಂಪೂರ್ಣ ಸರ್ವೇ, ಪಹಣಿ ಮುಂತಾದ ದಾಖಲೆಗಳ ಬದಲಾವಣೆ, ಗ್ರಾಮಗಳ ಗಡಿ ಗುರುತು ಮುಂತಾದ ಎಲ್ಲ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ. ಗ್ರಾಮಗಳ ರಚನೆಯ ಸಂಬಂಧ ಜಿಲ್ಲಾಡಳಿತದಿಂದ ಬೇಕಾಗಿರುವ ಎಲ್ಲ ದಾಖಲೆಗಳನ್ನೂ ಈಗಾಗಲೇ ಸಲ್ಲಿಕೆ ಮಾಡಲಾಗಿದೆ.
ರಾಮನಗರ ತಾಲೂಕು : ಕಸಬಾ ಹೋಬಳಿಯ ಗೊಲ್ಲರದೊಡ್ಡಿ, ಚೌಡೇಶ್ವರಿ ಪುರ, ಕೈಲಾಂಚ ಹೋಬಳಿಯ ಅಚ್ಚಲುದೊಡ್ಡಿ, ಗೊಲ್ಲರದೊಡ್ಡಿ, ಕೂಟಗಲ್ ಹೋಬಳಿಯ ವಡ್ಡರದೊಡ್ಡಿ, ಹನಮಂತಪುರ-ನಾಗರಕಲ್ಲುದೊಡ್ಡಿ, ಹೊಸೂರು.
ಮಾಗಡಿ ತಾಲೂಕು: ಕಸಬಾ ಹೋಬಳಿಯ ಕದರಯ್ಯನಪಾಳ್ಯ, ಭೈರನಹಳ್ಳಿ, ಬಸವನಗುಡಿಪಾಳ್ಯ, ಮಠದಪಾಳ್ಯ, ಹನುಮಾಪುರ, ಗೊಲ್ಲರಹಟ್ಟಿ - ಬಸವನಪಾಳ್ಯ, ತಿಪ್ಪಸಂದ್ರ ಹೋಬಳಿಯ ಚಿಗಳೂರು, ಜನತಾ ಕಾಲನಿ, ಹೊನ್ನಾಪುರಪಾಳ್ಯ, ಚೌಡನಪಾಳ್ಯ, ಸೋಲೂರು ಹೋಬಳಿಯ ಹೊಸೂರು, ಕೆಂಪಚಿಕ್ಕನಹಳ್ಳಿ, ಗೊಲ್ಲಹಳ್ಳಿ, ಶ್ರೀರಾಮಪುರ ಕಾಲನಿ, ಮಾಡಬಾಳ್ ಹೋಬಳಿಯ ಹೊಸದೊಡ್ಡಿ, ಸಿದ್ದೇಶ್ವರ ನಗರ, ಚಿಟ್ಟನಹಳ್ಳಿ, ಮಾರೇಗೌಡನದೊಡ್ಡಿ, ವೀರೇಗೌಡನದೊಡ್ಡಿ, ಕುದೂರು ಹೋಬಳಿಯ ಹೂಜೇನಹಳ್ಳಿ, ಗೊಲ್ಲರಹಟ್ಟಿ. ಜಿಲ್ಲೆಯಲ್ಲಿ 44 ಹೊಸ ಕಂದಾಯ ಗ್ರಾಮಗಳ ಘೋಷಣೆ ಮಾಡಲಾಗಿದೆ. 450 ಉಪ ಗ್ರಾಮಗಳನ್ನು ಗುರುತಿಸಲಾಗಿದೆ. ಇವುಗಳ ಘೋಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಹೊಸ ಕಂದಾಯ ಗ್ರಾಮಗಳಿಗೆ ಇ - ಖಾತೆ ಸಹಿತ ಹಕ್ಕು ಪತ್ರ ನೀಡಲಾಗುತ್ತಿದೆ. ಈಗಾಗಲೇ 1800 ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. | ಯಶವಂತ್ ವಿ ಗುರುಕರ್, ಜಿಲ್ಲಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ