

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ 2024ರ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿಗೆ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆಯನ್ನು (ಎಫ್ಕೆಸಿಸಿಐ) ಆಯ್ಕೆ ಮಾಡಲಾಗಿದೆ.
ಕಸಾಪ ಸ್ಥಾಪಕ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಸ್ಥಾಪಿತವಾಗಿರುವ ಈ ದತ್ತಿ ಪ್ರಶಸ್ತಿಯು ಕೈಗಾರಿಕೆ, ಶಿಕ್ಷಣ, ಕೃಷಿ, ನೀರಾವರಿ, ವಿದ್ಯುಚ್ಛಕ್ತಿ, ಹಿಂದುಳಿದ ವರ್ಗದ ಕಲ್ಯಾಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ವೈದ್ಯಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಅಥವಾ ಸಂಸ್ಥೆಗೆ ನೀಡಬೇಕೆನ್ನುವುದು ದತ್ತಿಯ ಆಶಯವಾಗಿದೆ. ಇದೇ ಮೊದಲ ಬಾರಿಗೆ ಸಂಸ್ಥೆಯೊಂದಕ್ಕೆ ಈ ಪುರಸ್ಕಾರ ನೀಡಲಾಗುತ್ತಿದೆ.
ಎಫ್ಕೆಸಿಸಿಐ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮತ್ತು ವಿವಿಧ ಕೈಗಾರಿಕಾ ಸಂಸ್ಥೆಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೈಗಾರಿಕೆ, ವ್ಯಾಪಾರ, ವಾಣಿಜ್ಯ ಹೀಗೆ ಮೂರೂ ಕ್ಷೇತ್ರಗಳಲ್ಲಿಯೂ ಸದಸ್ಯರನ್ನು ಹೊಂದಿರುವ ಮಹಾ ಮಂಡಲಿಯು ಸುಮಾರು 5,000 ನೇರ ಸದಸ್ಯರನ್ನು ಹೊಂದಿದ್ದು, 5 ಲಕ್ಷ ಸಹ ಸದಸ್ಯರು ಹಾಗೂ 12 ಲಕ್ಷ ಜನ ಪರೋಕ್ಷ ಸದಸ್ಯರೂ ಇದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ಸದಸ್ಯರನ್ನು ಹೊಂದಿರುವ ಸಂಸ್ಥೆ ನಿಜವಾದ ಅರ್ಥದಲ್ಲಿ ಪ್ರಾತಿನಿಧಿಕವಾಗಿದ್ದು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ನಿರಂತರವಾಗಿ ಶ್ರಮಿಸುತ್ತಾ ಬರುತ್ತಿದೆ.
ದತ್ತಿ ಪ್ರಶಸ್ತಿ ಪುರಸ್ಕೃತ ಎಫ್ಕೆಸಿಸಿಐ ಸಂಸ್ಥೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದಿಸಿ ಇನ್ನಷ್ಟು ಸಾಮಾಜಿಕ ಕಾಳಜಿಯ ಕೆಲಸಗಳು ಸಂಸ್ಥೆಯಿಂದಾಗಲಿ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.