ಮೇ.20ರವರೆಗೆ ಎಲ್ಲೋ ಅಲರ್ಟ್ ಘೋಷಣೆ

PNK_2134 copy
Published on

ಮಂಗಳೂರು: ಕರಾವಳಿಗೆ ಮೇ.20ರ ವರೆಗೆ ಜಿಲ್ಲೆಯಲ್ಲಿ ಮಳೆಯ ಯೆಲ್ಲೋ ಅಲರ್ಟ್ ನೀಡಲಾಗಿದ್ದು, ದ.ಕ.ದ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸೋಮವಾರ ಬೆಳಗ್ಗಿನ ಜಾವ ಗುಡುಗು ಸಹಿತ ಸಾಧಾರಣ ಮಳೆ ಸುರಿದಿದೆ. ಸುಳ್ಯ, ಅರಂತೋಡು, ಹಾಲೆಟ್ಟಿ, ಬಡ್ಡಟ್ಕ, ಸಂಪಾಜೆ ಪರಿಸರದಲ್ಲಿ ಮಂಗಳವಾರ ಬೆಳಗ್ಗೆ ಮಳೆ ಸುರಿದಿದೆ. ಸೋಮವಾರ ರಾತ್ರಿ ಗ್ರಾಮೀಣ ಭಾಗಗಳಲ್ಲಿ ಉತ್ತಮ ಮಳೆಯಾಗಿ ಚಳಿ ಗಾಳಿ ಬೀಸತೊಡಗಿತ್ತು. ಮಂಗಳವಾರ ವಿವಿದೆಡೆ ಮುಂಜಾನೆ ಜಾವ ತಣ್ಣನೆಯ ಆಹ್ಲಾದಕರ ವಾತಾವರಣವಿತ್ತು. ಆದರೆ ಬಿಸಿಲೇರುತ್ತಿದ್ದಂತೆ ಮತ್ತೆ ಸೆಕೆ ಆವರಿಸಿತ್ತು. ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಅಬ್ಬರ ಕಂಡುಬಂದಿದೆ. ದ.ಕ ಜಿಲ್ಲೆಯಲ್ಲಿ ಮಂಗಳವಾರ ಸರಾಸರಿ 31.7 ಡಿಗ್ರಿ ಗರಿಷ್ಠ, 24.2 ಡಿಗ್ರಿ ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.

*ಗುಡುಗು ಮಿಂಚಿನೊಂದಿಗೆ ಉತ್ತಮ ಮಳೆ ಸಾಧ್ಯತೆ

ದ.ಕ, ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೇ.20ರ ವರೆಗೆ ಗಾಳಿ, ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ 1ವಾರ ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಾಗಿ ಬೀಚ್ ವ್ಯಾಪ್ತಿಯಲ್ಲೂ ಕಡಲಬ್ಬರ ಹೆಚ್ಚಳಗೊಳ್ಳಲಿದೆ. ರಾತ್ರಿ ವೇಳೆ ಚಳಿಯ ತೀವ್ರತೆ ಸಾಧಾರಣಕ್ಕಿಂತ ತುಸು ಹೆಚ್ಚಾಗಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಜೊತೆಗೆ ಆಲಿಕಲ್ಲು ಮಳೆ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net