

ಚಿಕ್ಕಬಳ್ಳಾಪುರ: ಸಾಮಾಜಿಕ ಮಾಧ್ಯಮಗಳು ಹಾಗೂ ಡಿಜಿಟಲ್ ಉಪಕರಣಗಳ ಆವಲಂಬನೆಯಿಂದ ಯುವ ಜನರ ಜೀವನದ ಗುಣಮಟ್ಟ ಕ್ಷೀಣಿಸುತ್ತಿದ್ದು ಇದನ್ನು ತಡೆಯುವ ಸಲುವಾಗಿ ಸತ್ಯ ಸಾಯಿ ಸಂಸ್ಥೆಯಲ್ಲಿ ಶೀಘ್ರದಲ್ಲೇ ಡಿಜಿಟಲ್ ವ್ಯಸನ ನಿರ್ಮೂಲನಾ ಕೇಂದ್ರ ಆರಂಭಿಸಲಾಗುತ್ತದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿನ ಸತ್ಯ ಸಾಯಿ ಪ್ರೇಮಾಮೃತಮ್ ಸಭಾಂಗಣದಲ್ಲಿ ಶುಕ್ರವಾರ ಕೈಗೊಂಡಿದ್ದ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 56ನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಡಿಜಿಟಲ್ ವ್ಯಸನದ ಪರಿಣಾಮವಾಗಿ ಯುವ ಜನರು ಸಾಮಾಜಿಕ ಜೀವನ ಮಹತ್ವವನ್ನು ಮರೆತಿದ್ದು ಎದುರು ಬದುರಾಗಿ ನೋಡಿ ಮಾತನಾಡಲು, ಒಂದೇ ಕೊಠಡಿಯಲ್ಲಿ ಮೂವರು ಕೆಲ ಹೊತ್ತು ಇರಲು ಸಾಧ್ಯವಾಗುತ್ತಿಲ್ಲ. ಒಬ್ಬೊಬ್ಬರೇ ಪ್ರತ್ಯೇಕವಾಗಿ ಇರಲು ಬಯಸುತ್ತಿದ್ದು ತಮ್ಮವರೊಂದಿಗೆ ಸಂವಹನ ನಡೆಸದೇ, ಚಾಟ್ ಜಿಪಿಟಿಯಂತಹ ತಂತ್ರಜ್ಞಾನಕ್ಕೆ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ. ಈಗಾಗಲೇ ನಿಮ್ಹಾನ್ಸ್‌ನಲ್ಲಿ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲೂ ಸಹ ಕೇಂದ್ರ ಕಾರ್ಯಾರಂಭಿಸಲಿದೆ ಎಂದರು.
ಮಕ್ಕಳಿಂದ ಮೊಬೈಲ್ ಫೋನ್ ಕಸಿದುಕೊಂಡರೆ ಕೋಪಗೊಳ್ಳುವ, ಹೆತ್ತವರಿಗೆ ಹಾನಿ ಮಾಡುವುದಕ್ಕೂ ಹಿಂಜರಿಯದ ಮನೋಭಾವನೆಯನ್ನು ಪ್ರದರ್ಶಿಸುತ್ತಿದ್ದು ಇಡೀ ಜಗತ್ತಿನಲ್ಲಿ ಇಂತಹ ಪರಿಸ್ಥಿತಿ ಇದೆ. ಮಕ್ಕಳ ವಿಚಾರವಾಗಿ ಪಾಲಕರು ಸಹ ನಿರೀಕ್ಷೆಗೂ ಮೀರಿದ ಫಲಿತಾಂಶಗಳನ್ನು ಬಯಸುತ್ತಿದ್ದಾರೆ. ಇದರ ಒತ್ತಡದಲ್ಲಿ ಮಕ್ಕಳು ತಪ್ಪು ದಾರಿಗೆ ಹೋಗುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ತೆಲಂಗಾಣದ ಪರಿಶಿಷ್ಟ ಪಂಗಡ, ಬುಡಕಟ್ಟು, ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಕಲ್ಯಾಣ ಸಚಿವ ಅಡ್ಲೂರಿ ಲಕ್ಷ್ಮಣ್ ಕುಮಾರ್ ಮಾತನಾಡಿ, ತೆಲಂಗಾಣದಲ್ಲಿನ ಸರ್ಕಾರಿ ಶಾಲೆಗಳಲ್ಲಿನ 16 ಲಕ್ಷ ಮಕ್ಕಳಿಗೆ ಪ್ರತಿ ನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದೇ ವೇಳೆ ಸಾಯಿ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ತೆಲಂಗಾಣದ ಗ್ರಾಮೀಣ ಭಾಗದ ಜನರಿಗೆ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದಕ್ಕೆ ಸರ್ಕಾರ ಅಗತ್ಯ ನೆರವು ನೀಡಲಾಗಿದೆ ಎಂದರು.
ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಸಂವಹನ ಸಚಿವ ಡಾ ದುಡ್ಡಿಲ್ಲಾ ಶ್ರೀಧರ್ ಬಾಬು, ಸ್ವೀಡನ್ ಪ್ರತಿನಿಧಿ ಡಾ ವಿಕ್ಕಿ ವೊರ್ವೌಲ್ಕಿಸ್, ನಾರ್ವೆ ಪ್ರತಿನಿಧಿಗಳಾದ ಲೊಟೆ ಮೌರಿಟ್ಜೆನ್ ಪ್ರಸ್ಥಸ್, ಬೊಡಿಲ್ ಮಾರ್ಟಿಜನ್ ಮತ್ತಿತರರು ಇದ್ದರು.
*ಮಾದರಿ ಕೆಲಸ
ಎಲ್ಲ ಭಾರತೀಯರೂ ಸಹ ಮುದ್ದೇನಹಳ್ಳಿಯಲ್ಲಿನ ಸತ್ಯ ಸಾಯಿ ಸಂಸ್ಥೆಗೆ ಭೇಟಿ ನೀಡಬೇಕು. ಇದರಿಂದ ನಿಜವಾದ ಭಾರತದ ದರ್ಶನವಾಗುತ್ತದೆ. ಇದೇ ಮಾದರಿಯಲ್ಲಿ ಇಲ್ಲಿನ ಚಟುವಟಿಕೆಯು ಇತರೆಡೆ ನಡೆಯುತ್ತಿರಬೇಕು ಎಂದು ಜೆಎನ್‌ಯು ಪ್ರೊಫೆಸರ್, ಖ್ಯಾತ ವಿಜ್ಞಾನಿ ಡಾ ಆನಂದ್ ರಂಗನಾಥನ್ ಹೇಳಿದರು. ಸದ್ಗುರುಗಳಿಂದ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ ಸ್ವೀಕರಿಸಿದರು.