

ಶ್ರೀನಿವಾಸಪುರ: ಮಾವು ಬೆಳೆಗೆ ಬೆಂಬಲ ಬೆಲೆ ಘೋಷಣೆ ಜತೆಗೆ ತಾಲೂಕಿನಲ್ಲಿ ಮಾವು ಸಂಸ್ಕರಣಾ ಟಕಗಳನ್ನು ತೆರೆಯಬೇಕು ಎಂದು ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.
ಮಾವು ಬೆಳೆಗೆ ಬೆಂಬಲ ಬೆಲೆ ಸೇರಿ ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ತಹಸೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು ಒಂದೂವರೇ ಲಕ್ಷ ಹೆಕ್ಟೇರ್ ಮಾವು ತೋಟಗಳ ಪೈಕಿ ಕೋಲಾರ ಜಿಲ್ಲೆಯಲ್ಲಿ 50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ಅದರಲ್ಲೂ ಶ್ರೀನಿವಾಸಪುರ ತಾಲೂಕಿನದ್ದೇ ಬಹುಪಾಲು. ರಾಜ್ಯದಲ್ಲಿ 15 ಲಕ್ಷ ಟನ್ ಮಾವು ಬೆಳೆದರೆ ಅದರಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿಯೇ 5 ಲಕ್ಷ ಟನ್ (ರಾಜ್ಯದ ಮೂರನೇ ಒಂದು ಭಾಗ) ಬೆಳೆಯಲಾಗುತ್ತದೆ. ಆದರೂ ಇಲ್ಲಿ ಬೆರಳಿಣಿಕೆಯಷ್ಟು ಸಂಸ್ಕರಣಾ ಘಟಕಗಳಿವೆ. ಇದರಿಂದ ಬೆಳಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾವು ಬೆಳೆಗಾರರನ್ನು ಪ್ರೋತ್ಯಾಹಿಸಲು, ಅವರ ಕಷ್ಟಕ್ಕೆ ಸ್ಪಂದಿಸಲು ತಾಲೂಕಿನಲ್ಲಿ ತಿರಳು ತೆಗಯುವ, ಉಪ್ಪಿಕಾಯಿ ತಯಾರಿಸುವ ಪ್ಯಾಕ್ಟರಿಗಳು, ಹೈಟೆಕ್ ಮಾವು ಸಂಸ್ಕರಣ ಘಟಕಗಳು ಸ್ಥಾಪನೆಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಕಾರ್ಯದರ್ಶಿ ಎಚ್.ಹರೀಶ್, ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ, ರೈತ ಮುಖಂಡರಾದ ಬೈರಾರೆಡ್ಡಿ, ಸೈಯದ್ಫಾರುಕ್, ಅಸ್ಲಂ, ಎಫ್ಎ.ರಮೇಶ್, ಪ್ರಭಾಕರಗೌಡ, ಬಚ್ಚೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲ್, ಮಾವು ಮಂಡಿಗಳ ಯೂನಿಯನ್ ಅಧ್ಯಕ್ಷ ಅಕ್ಬರ್ ಶರೀಪ್, ಮಂಡಿಗಳ ಮಾಲೀಕರಾದ ಮುಜ್ಮಿಲ್ಉಲ್ಲಾಖಾನ್, ಜಾಯಿದ್ಅನ್ಸಾರಿ, ಅನ್ಸೀಸ್ ಅಹ್ಮದ್, ಸನ್ಶಿಫ್ ಪ್ಯಾಕ್ಟರಿ ವ್ಯವಸ್ಥಾಪಕ ರಮಣ, ಆರ್.ಕೆ.ಜ್ಯೂಸ್ಪ್ಯಾಕ್ಟರಿ ವ್ಯವಸ್ಥಾಪಕ ಮಂಜುನಾಥರೆಡ್ಡಿ ಇದ್ದರು.
ಮಾರುಕಟ್ಟೆ ಜವಾಬ್ದಾರಿ ಯಾರಿಗೆ?
ಮಾವು ಹಂಗಾಮ ಶುರುವಾಗಿರುವಾಗಲೇ ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ಅವರು ವರ್ಗಾವಣೆಗೊಂಡಿದ್ದು, ಬೇರೆ ತಾಲೂಕಿನ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿಗೆ ಇಲ್ಲಿನ ಜವಾಬ್ದಾರಿ ನೀಡಲಾಗಿದೆ. ಕೋಟಿಗಟ್ಟಲೇ ವ್ಯವಾಹಾರ ನಡೆಯುವಾಗ ಎಪಿಎಂಸಿ ಮಾರುಕಟ್ಟೆಗೆ ಖಾಯಂ ಕಾರ್ಯದರ್ಶಿ ಇಲ್ಲವೆಂದರೆ ಹೇಗೆ?. ಸರ್ಕಾರ ಕೂಡಲೇ ಖಾಯಂ ಕಾರ್ಯದರ್ಶಿಯನ್ನು ನೇಮಿಸಬೇಕು. ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಅರ್ನಿದಿಷ್ಟಾವಧಿ ಬಂದ್ಗೆ ಕರೆ ನೀಡಲಾಗುವುದು ಎಂದು ನೀಲಟೂರು ಚಿನ್ನಪ್ಪರೆಡ್ಡಿ ಎಚ್ಚರಿಸಿದರು. ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಅವರು ರೈತರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಶ್ರೀ ಪರಿಹಾರ ನೀಡುವುದಾಗಿ ತಿಳಿಸಿದರು.