

ಪುತ್ತೂರು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ತ್ರಿಂಶೀಯ ವಾರ್ಷಿಕೋತ್ಸವ, ನೂತನ ಗ್ರಂಥ ಅನಾವರಣ - ಪ್ರಶಸ್ತಿ ಪ್ರದಾನ ಹಾಗೂ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಪೂಳ್ಯ ಶ್ರೀನಿವಾಸ ಸಭಾಭವನದಲ್ಲಿ ನಡೆಯಿತು.
ಹಿರಿಯ ವೈದಿಕ ಕೃಷ್ಣ ಭಟ್ಟ ಪೆಲತ್ತಡ್ಕ ಅವರಿಗೆ ಬ್ರಹ್ಮಶ್ರೀ ಮಿತ್ತೂರು ಪುರೋಹಿತಾ ಕೃಷ್ಣ ಭಟ್ಟ ಸಂಸ್ಮರಣ ವೈದಿಕ ವಿದ್ವತ್ ಪ್ರಶಸ್ತಿ, ಹಿರಿಯ ಜ್ಯೋತಿಷ್ಯ ಡಿ. ವೆಂಕಟ್ರಮಣ ಭಟ್ಟ ಮಾಡಾವು ಅವರಿಗೆ ಸಂಪ್ರತಿಷ್ಠಾನದ ಶಾಸ್ತ್ರ ವಿದ್ವತ್ ಪ್ರಶಸ್ತಿ, ನಿಘಂಟು ರಚನೆಗಾಗಿ ವಿ ಕೃಷ್ಣ ಬೆಂಗಳೂರು ಅವರಿಗೆ ಪ್ರೊ. ಎಂ. ಮರಿಯಪ್ಪ ಭಟ್ಟ ಪ್ರಶಸ್ತಿ, ಮೂಲಿಕಾತಜ್ಞ ಕಾನತ್ತೂರು ಗೋವಿಂದ ಭಟ್ಟ ಕೂಡ್ಲು ಅವರಿಗೆ ಉಗ್ಗಪ್ಪಕೋಡಿ ವೈದ್ಯ ಪಂ. ಈಶ್ವರ ಭಟ್ಟ ವೈದ್ಯಪ್ರಶಸ್ತಿ ಪ್ರಧಾನ ಮಾಡಲಾಯಿತು. ಯುವ ವಯೋಲಿನ್ ಕಲಾವಿದೆ ಶ್ರೀಲಕ್ಷ್ಮೀ ಚೆನ್ನೈ ಅವರಿಗೆ ಎಚ್. ಎಂ. ಸಂಗೀತ ಕಲಾಪ್ರತಿಭಾ ಪುರಸ್ಕಾರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಅವರು ಬೆಂಗಳೂರು ನಾರಾಯಣ ಶಾನುಭಾಗ್ ಸಂಪಾದಕತ್ವದ ಧರ್ಮಕುತೂಹಲ ನೂತನ ಗ್ರಂಥ ಅನಾವರಣ ಮಾಡಿದರು. ಪುನರ್ ಮುದ್ರಿತ ಗ್ರಂಥಗಳಾದ ಪಂಚಾಯಿತನ ದೇವರ ಪೂಜೆ, ಶ್ರೀಸತ್ಯಗಣಪತಿವ್ರತವಿಧಿಃ ಅನ್ನು ಬಿಡುಗಡೆಮಾಡಲಾಯಿತು. ಸಂಸ್ಕೃತ ವಿದ್ವಾಂಸ ಬಿ.ಎಲ್. ನಾಗರಾಜ ಉಪಸ್ಥಿತರಿದ್ದರು.
ಸದಾಶಿವ ಭಟ್ಟ ಬಳಗ ಪ್ರಾರ್ಥಿಸಿದರು. ಆಡಳಿತ ಮಂಡಳಿಯ ಸದಸ್ಯ ಶ್ರೀಪ್ರಕಾಶ್ ಕುಕ್ಕಿಲ ಸ್ವಾಗತಿಸಿದರು. ಪಾದೆಕಲ್ಲು ವಿಷ್ಣು ಭಟ್ಟ ಪ್ರಸ್ತಾವನೆಗೈದರು. ಈಶ್ವರ ಭಟ್ಟ ಮಿತ್ತೂರು, ಶ್ರೀಧರ ಭಟ್ಟ ಹಳೆಮನೆ, ಭಡೆಕ್ಕಿಲ ಸೀತಾರಾಮ ಭಟ್ಟ, ರೇವತಿ ಯು. ಎಂ. ಭಟ್ಟ, ಕೊಂಕೋಡಿ ತಿರುಮಲೇಶ್ವರ ಭಟ್ಟ ಪ್ರಶಸ್ತಿ ಪತ್ರ ವಾಚಿಸಿದರು. ಕಾರ್ಯದರ್ಶಿ ಎಂ.ಎಚ್. ರಮೇಶ್ ವಂದಿಸಿದರು. ತಿರುಮಲೇಶ್ವರ ಭಟ್ ಪಿಲಿಂಜ, ಶ್ರೀಹರಿ ಪಾದೆಕಲ್ಲು ಕಾರ್ಯಕ್ರಮ ನಿರೂಪಿಸಿದರು.