

ಸುಂಟಿಕೊಪ್ಪ: ಮಕ್ಕಳ ಪ್ರತಿಭೆಗಳನ್ನು ಹೊರ ತರುವಲ್ಲಿ ಶಾಲಾ ವಾರ್ಷಿಕೊತ್ಸವ ಸೂಕ್ತ ವೇದಿಕೆಯಾಗಿದೆ ಎಂದು ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕಾಜಿ ಹೇಳಿದರು.
7ನೇ ಹೊಸಕೋಟೆ ದೀಪ್ತಿ ಶಾಲೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮಕ್ಕಳು ಇಡೀ ವರ್ಷ 4 ಗೋಡೆಗಳ ನಡುವೆ ಕಲಿಯುತ್ತಾರೆ.ಪಾಲಕರು ಮತ್ತು ಶಿಕ್ಷಕರ ನಡುವೆ ಅಂತರವಿರುತ್ತದೆ. ಆದರೆ ವಾರ್ಷಿಕೋತ್ಸವ ಸಂದರ್ಭ ಶಿಕ್ಷಕರು ಪಾಲಕರು ಮತ್ತು ಮಕ್ಕಳು ಒಟ್ಟಾಗಿ ಬೆರೆಯುವುದರಿಂದ ಪರಸ್ಪರ ಸ್ನೇಹ ವಿಶ್ವಾಸ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ಶಾಲಾ ವಾರ್ಷಿಕೋತ್ಸವಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಗಮಿಸಿದ್ದು, ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪಾಲಕರು ಎಷ್ಟು ಅನೋನ್ಯವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಶಾಲೆಯು ಯಾವುದೇ ಭೇದ-ಭಾವವಿಲ್ಲದೆ ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಮಾನತೆಯನ್ನು ಅನುಸರಿಸಿಕೊಂಡು ಬಂದಿರುವುದು ಅತ್ಯಂತ ಮೆಚ್ಚುಗೆಯ ವಿಷಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ತರುವಲ್ಲಿ ಶಾಲಾ ವಾರ್ಷಿಕೋತ್ಸವ ಒಂದು ಪ್ರೇರಣೆ ಮತ್ತು ವೇದಿಕೆಯಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಟೆಸಿ ಮ್ಯಾನುವೇಲ್ ವಹಿಸಿದ್ದರು. ಎಜುಕೇಷನ್ ಕೌನಿಲ್ಸ್‌ರ್ ಸೌಮ್ಯಮರಿಯ, ಗ್ರಾ.ಪಂ. ಅಧ್ಯಕ್ಷ ಇ.ವಿ.ಜೋಸೆಫ್, ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ಫಾದರ್ ಸೆಬಾಸ್ಟಿನ್ ಪೂವತ್ತಿಗಲ್, ಕಾಫಿ ಬೆಳೆಗಾರರಾದ ದಾಸಂಡ ರಮೇಶ್ ಚಂಗಪ್ಪ, ಪಂಚಾಯಿತಿ ಸದಸ್ಯ ಮುಸ್ತಫ ಮತ್ತು ಶಾಜಿ ಮತ್ತಿತರರು ಇದ್ದರು.
ಮೊದಲಿಗೆ ಶಾಲಾ ಮಕ್ಕಳು ಕವಾಯತ್ ವಾದ್ಯಗೋಷ್ಠಿಯೊಂದಿಗೆ ಅತಿಥಿ ಗಣ್ಯರನ್ನು ಸಮಾರಂಭದ ವೇದಿಕೆಗೆ ಕರೆ ತಂದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರ ಮನಸೂರೆಗೊಳಿಸಿದವು.