ಮಹಾನ್ ನವೆಂಬರ್ ಕ್ರಾಂತಿಯ ವರ್ಷಾಚರಣೆ

21
Published on

ಮೈಸೂರು: ನಗರದ ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಕಚೇರಿಯಲ್ಲಿ ಮಹಾನ್ ನವೆಂಬರ್ ಕ್ರಾಂತಿಯ 107ನೇ ವರ್ಷಾಚರಣೆ ಅಂಗವಾಗಿ ಲೆನಿನ್ ಮತ್ತು ಸ್ಟಾಲಿನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಎಸ್‌ಯುಸಿಐ ಮೈಸೂರು ಜಿಲ್ಲಾ ಕಾರ್ಯದರ್ಶಿ ಬಿ.ರವಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಕಾರ್ಲ್‌ಮಾರ್ಕ್ಸ್ ಅವರು ಮೊದಲ ಬಾರಿಗೆ ಸಮಾಜವಾದಿ ಕ್ರಾಂತಿಯ ಮೂಲಕ ಕಾರ್ಮಿಕ ವರ್ಗಕ್ಕೆ ಅಧಿಕಾರ ಬರುತ್ತದೆ ಎಂದು ವೈಜ್ಞಾನಿಕ ಭವಿಷ್ಯ ನುಡಿದಾಗ ಇದನ್ನು ಬಂಡವಾಳಶಾಹಿ ವರ್ಗ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದರು.

ಅವಿದ್ಯಾವಂತ, ಹಿಂದುಳಿದ ಕಾರ್ಮಿಕರು ರಾಜ್ಯಾಧಿಕಾರ ಪಡೆಯುವುದು ಸಾಧ್ಯ ಎಂದು ಅವರು ಬಲವಾಗಿ ನಂಬಿರಲಿಲ್ಲ. ಆದರೆ ಲೆನಿನ್ ಅವರ ನೇತೃತ್ವದಲ್ಲಿ ಬೋಲ್ಶೆವಿಕ್ ಪಕ್ಷವು ರಷ್ಯಾದಲ್ಲಿ 1917 ರಲ್ಲಿ ಸಮಾಜವಾದಿ ಕ್ರಾಂತಿಯನ್ನು ಸಾಕಾರಗೊಳಿಸಿತು. ನಂತರದಲ್ಲಿ ಸ್ಟಾಲಿನ್ ಅವರು ರಷ್ಯಾದಲ್ಲಿ ಸಮಾಜವಾದಿ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದರು ಎಂದು ಹೇಳಿದರು.

ಕೈಗಾರಿಕೆಗಳಲ್ಲಿ ಮತ್ತು ಕೃಷಿ ರಂಗದಲ್ಲಿ ಸಮಾಜವಾದಿ ಆರ್ಥಿಕತೆಯನ್ನು ಪ್ರಬಲವಾಗಿ ಬೆಳೆಸಿ ಜಗತ್ತಿನ ಅತ್ಯಂತ ಮುಂದುವರಿದ ದೇಶಗಳ ಸಾಲಿಗೆ ರಷ್ಯಾವನ್ನು ತಂದರು. ಇಂದಿಗೂ 1917ರಲ್ಲಿ ನಡೆದ ಸಮಾಜವಾದಿ ಕ್ರಾಂತಿ ಮತ್ತು ಆನಂತರ ರಷ್ಯಾ ಮಾಡಿದ ಸಾಧನೆ ಜಗತ್ತಿನ ದುಡಿಯುವ ವರ್ಗಕ್ಕೆ ಒಂದು ಮಾದರಿಯಾಗಿದೆ ಎಂದು ಹೇಳಿದರು.

ಮುಖಂಡರಾದ ಚಂದ್ರಶೇಖರ್ ಮೇಟಿ, ಪಿ.ಎಸ್.ಸಂಧ್ಯಾ, ಹರೀಶ್, ಸುನೀಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net