

ಕುಶಾಲನಗರ: ಇಲ್ಲಿನ ಶ್ರೀ ಕೋಣಮಾರಮ್ಮ ದೇವಾಲಯದ 21ನೇ ವಾರ್ಷಿಕೋತ್ಸವ ಮಂಗಳವಾರ ಮತ್ತು ಬುಧವಾರ ಎರಡು ದಿನ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ಮುತ್ತೈದೆಯರು ಕಾವೇರಿ ನದಿಯಿಂದ ಕಳಸದೊಂದಿಗೆ ದೇವಿ ವಿಗ್ರಹ ತಂದು ಪ್ರತಿಷ್ಠಾಪಿಸಿ, ದೇವಿಯ ಸನ್ನಿಧಿಯಲ್ಲಿ ಗಣಪತಿ ಹೋಮ ಮತ್ತು ವಿವಿಧ ಪೂಜಾ ಕೈಂಕರ್ಯಗಳನ್ನು ಪ್ರಧಾನ ಅರ್ಚಕ ಎಚ್.ಜೆ.ಲೋಕೇಶ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ಎರಡು ದಿನವೂ ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಭಕ್ತರಿಗೆ ದೇವತಾ ಸೇವಾ ಟ್ರಸ್ಟ್ ವತಿಯಿಂದ ಎರಡು ದಿನ ಅನ್ನಸಂತರ್ಪಣೆ ನಡೆಯಿತು. ಮಂಗಳವಾರ ಮಾಜಿ ಶಾಸಕ ಅಪ್ಪಚ್ಚು ರಂಜನ್ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವತಾ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಎಸ್.ಜೆ.ಸತೀಶ್, ಖಜಾಂಚಿ ಪರಮೇಶ್, ಸಹ ಕಾರ್ಯದರ್ಶಿ ಮಂಜು, ಮಾಜಿ ಅಧ್ಯಕ್ಷರಾದ ಬಿ.ಜಯವರ್ಧನ, ಸತೀಶ್, ಚೆಲುವರಾಜು, ಶಿವಾನಂದ ಸೇರಿದಂತೆ ನಿರ್ದೇಶಕರು ವಾರ್ಷಿಕೋತ್ಸವದ ಮೇಲುಸ್ತುವಾರಿ ವಹಿಸಿದ್ದರು.
ಪೊಲೀಸ್ ಬಂದೋಬಸ್ತ್: ವಾರ್ಷಿಕೋತ್ಸವ ಅಂಗವಾಗಿ ದೇವಾಲಯದ ಸುತ್ತಲಿನ ರಸ್ತೆಗಳನ್ನು ಬಂದ್ ಮಾಡಿ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಶಾಲನಗರ ನಗರ ಠಾಣಾಧಿಕಾರಿ ಗೀತಾ ಅವರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಸಂಚಾರ ಠಾಣಾಧಿಕಾರಿ ಕಾಶಿನಾಥ್ ನೇತೃತ್ವದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲಾಯಿತು.