

ಸುಂಟಿಕೊಪ್ಪ: ಏಳನೇ ಹೊಸಕೋಟೆ ಸಂತ ಸೆಬಾಸ್ಟೀನ್ ಅವರ ದೇವಾಲಯದ ವಾರ್ಷಿಕೋತ್ಸವದ ಮೂರನೇ ದಿನದ ವಿಶೇಷ ಅಡಂಬರ ಪೂಜೆ ಸೇರಿದಂತೆ ಆರಾಧನೆ, ಅಂಬುಕಾಣಿಕೆ ಹಾಗೂ ಸಂತ ಸಬಾಸ್ಟೀನ್ ಅವರ ಸ್ವರೂಪ ಇರಿಸಿ ಮೆರವಣಿಗೆಯೊಂದಿಗೆ ಸಹಭೋಜನದೊಂದಿಗೆ ವಾರ್ಷಿಕೋತ್ಸವಕ್ಕೆ ಸಮಾಪ್ತಿಗೊಂಡಿತು.
ಸಂತ ಸೆಬಾಸ್ಟೀನ್ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರಿಸಲಾಗಿತ್ತು. ಶನಿವಾರ ಸಂಜೆ ಧ್ವಜಾರೋಹಣವನ್ನು ದೇವಾಲಯದ ಧರ್ಮಗುರುಗಳಾದ ರೆ.ಫಾದರ್ ಸೆಬಾಸ್ಟೀನ್ ಪೂವತ್ತಿಗಲ್ ನೇರವೇರಿಸುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ್ದರು. ಹಬ್ಬದ ಅಂಗವಾಗಿ 4.45ಕ್ಕೆ ದಿವ್ಯ ಬಲಿಪೂಜೆ ಹಾಗೂ ಸಂಜೆ 6. ಗಂಟೆಗೆ ಕ್ರೈಸ್ತ ಭಕ್ತಾಧಿಗಳು ಸಂಬಂಧಿಕರ ಸಮಾಧಿ ಸಂದರ್ಶನ ನಡೆಸಿ, ಮೃತರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಭಾನುವಾರ ಸಂಜೆ 5 ಗಂಟೆಗೆ ಹಬ್ಬದ ಪೂರ್ವಕ ದಿವ್ಯ ಬಲಿಪೂಜೆ, ಪರಮ ಪ್ರಸಾದದ ಆರಾಧನೆ ನೊವೇನಾ ಹಾಗೂ 6.15 ಕ್ಕೆ ಆಶೀರ್ವಾದವನ್ನು ಮೈಸೂರು ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲ ವಂ.ಪಾ.ಜಿಂಟೋ ಇಂಜಿಕಾಲಾಯಿಲ್ ನೇರವೇರಿಸಿದರು.
ಭಾನುವಾರ ಸಂಜೆ ತಲಚೇರಿಯ ಮಹಾಧರ್ಮ ಪ್ರಾಂತ್ಯದ ವಂ.ಫಾ. ಜಿತಿನ್ ವಯಲಿಂಗಲ್ ಮಡಿಕೇರಿ ವಲಯ ಧರ್ಮಗುರುಗಳಾದ ದೀಪಕ್ ಜಾರ್ಜ್, ಕುಶಾಲನಗರನ ರೇ.ಫಾ.ಮಾರ್ಟಿನ್, ಸುಂಟಿಕೊಪ್ಪ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ವಿಜಯಕುಮಾರ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ಧರ್ಮಗುರು ಅವಿನಾಶ್, ಸಿದ್ದಾಪುರ, ಗೋಣಿಕೊಪ್ಪ ಭಾಗಗಳಿಂದ ವಿವಿಧ ಧರ್ಮಕೇಂದ್ರದ 15ಕ್ಕೂ ಹೆಚ್ಚು ಧರ್ಮಗುರುಗಳು ಹಬ್ಬದ ವಿಧಾನ ಪೂರ್ವಕ ಆಡಂಬರ ದಿವ್ಯ ಬಲಿಪೂಜೆಯನ್ನು ಸರ್ಮಪಿಸಿದರು.
ನಂತರ ವಿದ್ಯುತ್ ದೀಪಾಲಂಕೃತ ತೇರಿನಲ್ಲಿ ಸಂತ ಸಬಾಸ್ಟೀನ್ ಅವರ ಸ್ವರೂಪ ಇರಿಸಿ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೇರೆದಿದ್ದ ಕ್ರೈಸ್ತರು ಮೊಂಬತ್ತಿಯನ್ನು ಹಿಡಿದು ಪ್ರಾರ್ಥನೆಯನ್ನು ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ರಾತ್ರಿ ಸ್ನೇಹ ಭೋಜನ ನಂತರ ಹರಾಜು ಪ್ರಕ್ರಿಯೆ ನಡೆಯಿತು.
ವಾರ್ಷಿಕೋತ್ಸವದಲ್ಲಿ ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಸೋಮವಾರಪೇಟೆ, ಸಿದ್ದಾಪುರ, ಗೋಣಿಕೊಪ್ಪ ಭಾಗಗಳಿಂದ ಕನ್ಯಾಸ್ತ್ರೀಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕ್ರೈಸ್ತ ಭಕ್ತಾದಿಗಳು ಪಾಲ್ಗೊಂಡಿದ್ದರು.