ಡಿ. 2ರಿಂದ ಕಾಮಧೇನು ಕ್ಷೇತ್ರದ ವಾರ್ಷಿಕೋತ್ಸವ

Dr.Nanjundaswamy
Published on

ಚಿಕ್ಕಮಗಳೂರು: ನಗರದ ರತ್ನಗಿರಿ ರಸ್ತೆಯ ಶ್ರೀ ಕಾಮಧೇನು ಧಾರ್ಮಿಕ ಕ್ಷೇತ್ರದ 21ನೇ ವಾರ್ಷಿಕೋತ್ಸವ ಡಿ.2 ಮತ್ತು 3 ರಂದು ನಡೆಯಲಿದ್ದು, ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಧರ್ಮದರ್ಶಿ ಡಾ.ಎಂ.ಎಸ್.ನಂಜುಂಡಸ್ವಾಮಿ ತಿಳಿಸಿದರು.

ವೈವಿಧ್ಯಮಯ ಕಾರ್ಯಕ್ರಮ

ಶ್ರೀ ಕಾಮಧೇನು ಮಹಾ ಶಕ್ತಿ ಗಣಪತಿ, ಧನ್ವಂತರಿ ಮೃತ್ಯುಂಜಯ ಶ್ರೀಕಂಠೇಶ್ವರಸ್ವಾಮಿ ಹಾಗೂ ಜಗನ್ಮಾತೆ ಕಾಮಧೇನು ಶ್ರೀ ರಾಜರಾಜೇಶ್ವರಿ ಅಮ್ಮನವರು, ಬಾಲಸುಬ್ರಹ್ಮಣ್ಯ ಸ್ವಾಮಿ ಮತ್ತು ಅಭಯ ಸಂಜೀವಿನಿ ಮಾರುತಿ ಸಾನ್ನಿಧ್ಯದ ಕ್ಷೇತ್ರ ಇದಾಗಿದ್ದು, ಈ ಎರಡು ದಿನಗಳಲ್ಲಿ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾತ್ರಿ ಕಾರ್ತಿಕ ದೀಪೋತ್ಸವ

2 ರಂದು ಬೆಳಗ್ಗೆ 8 ಗಂಟೆಗೆ ಫಲಪಂಚಾಮೃತ ಅಭಿಷೇಕ, ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ರಾತ್ರಿ 9.30ಕ್ಕೆ ಕಾರ್ತಿಕ ದೀಪೋತ್ಸವ, 3 ರಂದು ಬೆಳಗ್ಗೆ 7ಕ್ಕೆ ಸಹಸ್ರ ಕದಳಿ ಮಾರುತಿ ಹೋಮ, 9ಕ್ಕೆ ಸಂಕಷ್ಟಹರ ಚತುರ್ಥಿ ಪೂಜೆ, ಸಹಸ್ರ ಮೋದಕ, ಸಹಸ್ರ ನಾರಿಕೇಳ ಮತ್ತು ಅಷ್ಟದ್ರವ್ಯ ಗಣಪತಿ ಹೋಮ, ಮಧ್ಯಾಹ್ನ ಪೂರ್ಣಾಹುತಿ, ಅನಂತರ ದೇವಾಲಯದ ಆವರಣದಲ್ಲಿ ಪ್ರಾಕಾರೋತ್ಸವ ನಡೆಯಲಿದೆ. ಬಳಿಕ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ರಾತ್ರಿ 9ಕ್ಕೆ ಸಂಕಷ್ಟಹರ ಚತುರ್ಥಿ ಕಥಾಶ್ರವಣ, ಕಾರ್ತಿಕ ದೀಪೋತ್ಸವ ಜರುಗಲಿವೆ ಎಂದು ಮಾಹಿತಿ ನೀಡಿದರು.

ಈ ಬಾರಿ ರಥೋತ್ಸವ ಇಲ್ಲ

ಕಳೆದ 20 ವರ್ಷಗಳಿಂದ ಕ್ಷೇತ್ರದಲ್ಲಿ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಪ್ರತಿ ಬಾರಿ ಮೂರುದಿನಗಳ ಕಾಲ ಗರುಡೋತ್ಸವ, ಪಲ್ಲಕ್ಕಿ ಹಾಗೂ ರಥೋತ್ಸವ ರಾಜಬೀದಿಯಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಉತ್ಸವ ಹಾಗೂ ರಥೋತ್ಸವವನ್ನು ನಡೆಸುತ್ತಿಲ್ಲ ಎಂದು ತಿಳಿಸಿದರು.

ದೇಶದಲ್ಲಿ ಈ ಬಾರಿ ಜಲಪ್ರಳಯ, ಭೂಕಂಪ, ಕರೊನಾದಿಂದ ಜನ ಸಂಕಷ್ಟದಲ್ಲಿದ್ದಾರೆ. ಸರ್ಕಾರದ ನಿಯಮಾನುಸಾರ ಕಾರ್ಯಕ್ರಮ ಸರಳವಾಗಿ ಆಚರಿಸಲಿದ್ದು, ಸಂಕಷ್ಟಗಳ ಪರಿಹಾರಕ್ಕೆ ಪ್ರಾರ್ಥಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ವ್ಯವಸ್ಥಾಪಕ ಅನಂತರಾಮು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net