ಯಕ್ಷಗಾನ ಕಲೆಯಿಂದ ಭಾಷೆಯ ಮೇಲೆ ಪ್ರಭುತ್ವ...

Yakshagaana Lead
Published on

ಮಾಹೆಯ ಡಾ. ಎಚ್​. ಎಸ್​. ಬಲ್ಲಾಳ್​ ಅಭಿಮತ

ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ಯಕ್ಷಗಾನ ಕಲೆ ಪ್ರಾಚೀನವಾದ ರಂಗಕಲೆಯಾಗಿದೆ. ಶಾಲಾ ಶಿಕ್ಷಣದೊಂದಿಗೆ ಯಕ್ಷಗಾನದಲ್ಲಿ ಮಕ್ಕಳು ತೊಡಗಿಕೊಳ್ಳುವಂತಾಗಲು ಇಂದ್ರಾಳಿ ಯಕ್ಷಗಾನ ಕೇಂದ್ರವು ನಿರಂತರವಾಗಿ ವಿಶೇಷ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ. ಅಂತಹ ಶ್ರೇಷ್ಠ ಕಲೆಯನ್ನು ವಿದ್ಯಾರ್ಥಿಗಳು ಕಲಿತಲ್ಲಿ ಕನ್ನಡ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಾಗುತ್ತದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಅಭಿಮತ ವ್ಯಕ್ತಪಡಿಸಿದರು.

ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಾಹೆ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಸಂಸ್ಥೆಯ 52ನೇ ವಾರ್ಷಿಕೋತ್ಸವ ಹಾಗೂ ದಿ.ಎಂ.ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದೈವಾರಾಧನೆಯ ಕಲೆ

ಯಕ್ಷಗಾನ ಕೇಂದ್ರದ ಸಲಹಾ ಸಮಿತಿಯ ಅಧ್ಯಕ್ಷ ಕಿಶನ್​ ಹೆಗ್ಡೆ ಪಳ್ಳಿ ಮಾತನಾಡಿ, ಯಕ್ಷಗಾನವು ಕೇವಲ ಸಾಂಸ್ಕೃತಿಕ ಕಲೆಯಲ್ಲ. ಅದು ದೈವಾರಾಧನೆಯ ಕಲೆಯೂ ಆಗಿದೆ. ಹೀಗಾಗಿ ಶ್ರದ್ಧೆಯಿಂದ ಮಕ್ಕಳು ಈ ಕಲೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಪಾಲಕರಿಗೆ ಕರೆ ನೀಡಿದರು.

ಪ್ರಶಸ್ತಿ ಪ್ರದಾನ

Yakshagaana-2
ಯಕ್ಷಗಾನ ಕಲಾವಿದ ಶ್ರೀನಿವಾಸ ದೇವಾಡಿಗ ನಾಗೂರು ಅವರಿಗೆದಿ. ದಿ.ಎಂ.ಎಂ. ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೇಂದ್ರದ ವಿದ್ಯಾರ್ಥಿಯಾಗಿದ್ದ ಪ್ರವೀಣ್​ ಕೊಪ್ಪಲ್​ ಅವರನ್ನೂ ಸಹ ಸನ್ಮಾನಿಸಿ, ಗೌರವಿಸಲಾಯಿತು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಎಂ.ಎಂ. ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ವೈ.ಸೀತಾರಾಂ ಶೆಟ್ಟಿ, ಎಂಐಟಿ ಪ್ರಾಧ್ಯಾಪಕ ಪ್ರೊ. ಉದಯಕುಮಾರ್​ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಮಂಜುನಾಥ ಮಯ್ಯ, ವಿಶ್ವನಾಥ ಶೆಣೈ, ಭುವನಪ್ರಸಾದ್​ ಹೆಗ್ಡೆ ಉಪಸ್ಥಿತರಿದ್ದರು.

ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ಕೇಂದ್ರದಲ್ಲಿ ತರಬೇತಿಗೊಂಡ ವಿವಿಧ ಹಂತಗಳ ವಿದ್ಯಾರ್ಥಿಗಳಿಂದ 'ಭೀಷ್ಮ ವಿಜಯ' ಯಕ್ಷಗಾನ ಪ್ರದರ್ಶನಗೊಂಡಿತು.

ವಿದ್ಯಾರ್ಥಿ ಜೀವನದಲ್ಲಿ ಯಕ್ಷಗಾನ ಕಲಿಕೆಗೆ ಅವಕಾಶ ಲಭಿಸಿದರೆ ಅವರಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಪೂರಕವಾಗಲಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ಯಕ್ಷಗಾನದ ಸರ್ಟಿಫಿಕೇಟ್​ ಕೋರ್ಸ್​ ಆರಂಭಿಸಲಿದ್ದೇವೆ. | ಡಾ. ನಾರಾಯಣ ಸಭಾಹಿತ. ಮಾಹೆ ಸಹಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net