

ಮೈಸೂರು: ಗಾಂಧಿ ನಗರದ ಶಿವಯೋಗಿಸ್ವಾಮಿ ಮೂರನೇ ಮುಖ್ಯ ರಸ್ತೆಯ ಶ್ರೀ ದುರ್ಗಾದೇವಿ ದೇವಸ್ಥಾನದ 19ನೇ ವಾರ್ಷಿಕೋತ್ಸವ ಅಂಗವಾಗಿ ಮಹಾಪೂಜೆ ಮತ್ತು ಕುಂಬಾಭಿಷೇಕ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಅಂದು ಬೆಳಗ್ಗೆ 10.30ಕ್ಕೆ ಪುಣ್ಯಾಹ, ಗಣಪತಿಪೂಜೆ, ನವಗ್ರಹ ಪೂಜೆ, ನವಗ್ರಹ ಹೋಮ, ಕಳಶಾರಾಧನೆ ಮತ್ತು ಗಣಪತಿ ವಾಸ್ತು, ನವಗ್ರಹ ಹೋಮ ಮತ್ತು ದುರ್ಗಿ ಹೋಮ, ಪೂರ್ಣಾಹುತಿ, ಕುಂಭಾಭಿಷೇಕ ನೆರವೇರಿಸಿ ನಂತರ ಮಹಾಮಂಗಳಾರತಿ ನಡೆಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಶ್ರೀ ದುರ್ಗಾದೇವಿ ದರ್ಶನ ಪಡೆದರು.
ಶ್ರೀ ದುರ್ಗಾದೇವಿ ಸೇವಾ ಸಮಿತಿ ಅಧ್ಯಕ್ಷ ಎಂ.ಪಿ.ನಾಗರಾಜು, ಉಪಾಧ್ಯಕ್ಷ ಆರ್.ಅಶೋಕ್ ಕುಮಾರ್ ಮತ್ತು ಪುರೋಹಿತರಾದ ಎಂ.ರಂಗರಾಜು, ಎಲ್.ದಿಲೀಪ್ ಕುಮಾರ್ ನೇತೃತ್ವದಲ್ಲಿ ಹೋಮ ಮತ್ತು ಪೂಜೆ ನೆರವೇರಿತು.
ಇತಿಹಾಸ: 1945ರಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನಲಾಗಿದ್ದು, ಅಂದಿನಿಂದಲೂ ಪೂಜೆ-ಪುನಸ್ಕಾರ ಹಾಗೂ ಯುಗಾದಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿತ್ತು. ಕಾಲಕ್ರಮೇಣ ದೇವಸ್ಥಾನ ಶಿಥಿಲಗೊಂಡ ಕಾರಣ 2004ರ ಫೆಬ್ರವರಿ 1ರಂದು ಜೀರ್ಣೋದ್ಧಾರ ಮಾಡಿ ಹೊಸದಾಗಿ ಶಿಲಾಮೂರ್ತಿ ಪ್ರತಿಷ್ಠಾಪಿಸಿ ನವರಾತ್ರಿ ಸಮಯದಲ್ಲಿ ಶ್ರೀ ದುರ್ಗಾದೇವಿಗೆ ಪ್ರತಿದಿನ ಒಂದೊಂದು ಅಲಂಕಾರ ನೆರವೇರಿಸಿಕೊಂಡು ಬರಲಾಗುತ್ತಿದೆ.
ಯುಗಾದಿ ಹಬ್ಬದ ದಿನದಂದು ಶ್ರೀ ದುರ್ಗಾದೇವಿಗೆ ಕಾರಂಜಿ ಕೆರೆ ಬಳಿಯಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹೋಮ ನಡೆಸಿ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಅಂದು ನಜರ್‌ಬಾದ್‌ನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮಂಗಳಾರತಿ ಪಡೆದು ಗಾಂಧಿ ನಗರಕ್ಕೆ ಆಗಮಿಸುವ ರಥ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿ ಮನೆಗಳಲ್ಲೂ ಪೂಜೆ ಸ್ವೀಕರಿಸಿದ ನಂತರ ದೇವಸ್ಥಾನ ತಲುಪುತ್ತದೆ. ಮಂಗಳವಾರ ಅಥವಾ ಶುಕ್ರವಾರ ಮರುಪೂಜೆ ದಿನ ಶ್ರೀ ದುರ್ಗಾದೇವಿಯನ್ನು ಸ್ವ ಸ್ಥಾನದಲ್ಲಿಟ್ಟು ವಿಶೇಷ ಪೂಜೆ ನೆರವೇರಿಸಿದ ನಂತರ ಯುಗಾದಿ ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.