ಚಿಕ್ಕತ್ತೂರು ಗ್ರಾಮ ಅರೆಗೌಡ ಸಂಘದ ವಾರ್ಷಿಕೋತ್ಸವ

chikkathuru
Published on

ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಅರೆಗೌಡ ಸಂಘದ ವಾರ್ಷಿಕೋತ್ಸವ ಮತ್ತು ಅರೆ ಗೌಡ ಜನಾಂಗದವರಿಂದ ಹುತ್ತರಿ ಹಬ್ಬದ ಸಂತೋಷ ಕೂಟವು ಅರೆ ಗೌಡ ಸಂಘದ ಅಧ್ಯಕ್ಷ ಮತ್ತಾರಿ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸೈನಿಕ ದೇವಜನ ಚಿಣ್ಣಪ್ಪ ನವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಜನಾಂಗದ ಅಚಾರ, ವಿಚಾರ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆ ಪೂರಕವಾಗುವುದು, ಅಲ್ಲದೆ ಯುವ ಪೀಳಿಗೆಗೆ ಇಂತಹ ಕಾರ್ಯಕ್ರಮಗಳು ಮಾದರಿಯಾಗುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಸಮುದಾಯದವರು ಒಂದೆಡೆ ಸೇರಲು ಸಂಘದ ಬೆಳವಣಿಗೆಗೆ ಚರ್ಚಿಸಲು ಸಹಕಾರವಾಗುವುದು ಎಂದರು.

ಸಂಘದ ಸ್ಥಾಪಕ ಅಧ್ಯಕ್ಷ ಚೆರಿಯಮನೆ ಮಾದಪ್ಪ ಮಾತಾನಾಡಿ, ಸಮುದಾಯದ ಮುಖೇನ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಸಂಘಟನೆಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಜೊತೆಯಲ್ಲಿ ನಶಿಸಿ ಹೋಗುತ್ತಿರುವ ಸಮುದಾಯದ ಕಲೆ, ಮತ್ತು ಕ್ರೀಡೆಗಳ ಬೆಳವಣಿಗೆ ಒತ್ತು ನೀಡಲು ಸಹಕಾರವಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮವು ದೊಡ್ಡೇರ ಲಲಿತಾ ಎಂಬುವರ ಕಾಫಿ ಕಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪೊಕ್ಕುಳಂಡ್ರ ಸುಂದರ, ಉಳಿಯಡ್ಕ ಜಗದೀಶ್, ಕರ್ಣಯ್ಯನ ಬಸಪ್ಪ, ಕರುಂಬಿ ಶಿವಪ್ಪ, ಮತ್ತಾರಿ ಹರ್ಷ, ಚೆರಿಯಮನೆ ಶಿಲಾ, ಮತ್ತಾರಿ ಲತಾ, ಪೊಕ್ಕುಳಂಡ್ರ ತುಳಸಿ, ಹುಲಿಮನೆ ವಸಂತ, ನಡುವಟ್ಟಿರ ಶಿವಪ್ರಕಾಶ್, ಸುಳ್ಳಕೋಡಿ ವಿಳಂಕುಮಾರ್, ಸೇರಿದಂತೆ ಅರೆ ಗೌಡ ಜನಾಂಗದ ಸಮುದಾಯದ ಭಾಂದವರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net