ಕೊಂಕಣಿ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ಅಗತ್ಯ

udp-16-bishop
Published on

ಉಡುಪಿ: ಮಾತೃ ಭಾಷೆ ಕೊಂಕಣಿಯ ಮೇಲೆ ಮಮತೆ ಮತ್ತು ಪ್ರೀತಿಯನ್ನು ಇರಿಸಿಕೊಳ್ಳಬೇಕು. ಪ್ರತಿನಿತ್ಯ ಮನೆಗಳಲ್ಲಿ ಕಡ್ಡಾಯವಾಗಿ ಮಾತನಾಡಬೇಕು. ಈ ಮೂಲಕ ಭಾಷಾ ಬೆಳವಣಿಗೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ. ಜೆರಾಲ್ಡ್​ ಐಸಾಕ್​ ಲೋಬೊ ಹೇಳಿದರು.

ಭಾನುವಾರ ಅಂಬಾಗಿಲು ಬಳಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್​ 11 ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದಿಂದ ಇತರ ಭಾಷೆೆಗಳಿಗೆ ಅವಲಂಬಿತರಾಗಬೇಕಾಗಿದೆ. ಹೀಗಾಗಿ ಮನೆಗಳಲ್ಲಿ ಕೊಂಕಣಿ ಭಾಷೆ ಉಪಯೋಗದಿಂದ ಮಾತೃಭಾಷೆ ಜೀವಂತವಾಗಿರಲು ಸಾಧ್ಯವಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸಾಹಿತಿ ವಲೇರಿಯನ್​ ಕ್ವಾಡ್ರಸ್​ ಅಜೆಕಾರ್​ ಮಾತನಾಡಿ, ಕೊಂಕಣಿ ಸಾಹಿತಿಗಳು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಬರುವ ಕೆಲಸವನ್ನು ಸಮುದಾಯ ಮಾಡಿಕೊಂಡು ಬಂದಿದೆ. ಈ ಮೂಲಕ ಕೊಂಕಣಿ ಸಾಹಿತಿಗಳು ಮುಂದೆಯೂ ಒಗ್ಗಟ್ಟಿನಿಂದ ಸಾಹಿತ್ಯದ ಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.

ಉಜ್ವಾಡ್​ ಪತ್ರಿಕೆಯ ಸಂಪಾದಕ ಆಲ್ವಿನ್​ ಸೆರಾವೊ ಅವರ ಜೆರಿಕೊಚೊ ಪಾಗೊರ್​ ಹಾಗೂ ಯುವ ಸಾಹಿತಿ ಅನ್ಸಿಟಾ ಡಿಸೋಜಾ ಇವರ ತಾಳೊ ಪುಸ್ತಕಗಳನ್ನು ಧಮಾರ್ಧ್ಯಕ್ಷರು ಲೋಕಾರ್ಪಣೆಗೊಳಿಸಿದರು. ಉಜ್ವಾಡ್​ ಪತ್ರಿಕೆಯ ಪ್ರಾಯೋಜಕತ್ವದಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳು ಹಾಗೂ ಕ್ವಿಜ್​ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಗೌರವಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್​ ಡೆಸಾ, ದಾಯ್ಜಿ ದುಬಾಯ್​ ಸಂಘಟನೆಯ ಮಂಗಳೂರು ಸಂಚಾಲಕ ಪ್ರವಿಣ್​ ತಾವ್ರೊ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ವಿಕಾರ್​ ಜನರಲ್​ ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಸ್ವಾಗತಿಸಿ, ಉಜ್ವಾಡ್​ ಪತ್ರಿಕೆಯ ಸಂಪಾದಕ ಆಲ್ವಿನ್​ ಸೆರಾವೊ ವಂದಿಸಿದರು. ಡಾ. ವಿನ್ಸೆಂಟ್​ ಆಳ್ವಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net