ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು

cptn
drama program
Published on

ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಆಂಗ್ಲ ಭಾಷೆ ವ್ಯವಹಾರಿಕವಾಗಿ ಬಳಸಿ, ಬದುಕಿನಲ್ಲಿ ಮಾತೃಭಾಷೆ ಕನ್ನಡ ಮಾತನಾಡಿ, ಅನ್ಯ ಭಾಷಿಗರಿಗೂ ಕನ್ನಡ ಕಲಿಸಲು ಮುಂದಾಗಬೇಕು ಎಂದು ನಟ ನವೀನ್ ಶಂಕರ್ ತಿಳಿಸಿದರು.
ಹೋಬಳಿಯ ನಲ್ಲೂರಲ್ಲಿ ರಂಗ ಭಾರತ್ ಅಡಿ ಏಕತ್ ಖಾಸಗಿ ಶಾಲೆಯ 2ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಭವಿಷ್ಯಕ್ಕೆ ಸಾಕ್ಷಿಯಾಗುವರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಾಡು, ನುಡಿ, ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು. ಉತ್ತಮ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಉಜ್ವಲ ಭವಿಷ್ಯ ಸಾಧ್ಯವೆಂದು ತಿಳಿಸಿದರು.
ಪಾಲಕರು ತಮ್ಮ ಮಕ್ಕಳಿಗೆ ವ್ಯಕ್ತಿ ವಿಕಸನಕ್ಕೆ ಬೇಕಾಗುವ ವಿಚಾರಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಪಾಲಕರು ತಮ್ಮ ದುಡಿಮೆಯ ಜತೆಗೆ ಮಗು ಕಲಿಕೆಯ ಪ್ರಗತಿ ಸಾಗುತ್ತಿರುವ ರೀತಿ-ನೀತಿ, ಅವರ ಆಟ-ಪಾಠದಲ್ಲಿ ತಮ್ಮನ್ನು ತಾವು ಕೆಲ ಸಮಯ ಮೀಸಲಿಡಬೇಕು ಎಂದು ಪಾಲಕರಿಗೆ ನಟಿ ಅರ್ಚನಾ ಜೋಷಿ ಕಿವಿಮಾತು ಹೇಳಿದರು.
ಏಕತ್ ಖಾಸಗಿ ಶಾಲಾ ಸಂಸ್ಥಾಪಕ ನಾಗೇಶ್ ಮಾತನಾಡಿ, ನಮ್ಮಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಕ್ರೀಡೆ, ಸಾಹಿತ್ಯ, ದೇಶದ ವಿವಿಧ ಶೈಲಿಯ ಮನರಂಜನೆ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಮಗುವಿನ ಪ್ರತಿಭೆಗೆ ಅನುಗುಣವಾಗಿ ನಮ್ಮ ಶಿಕ್ಷಕವೃಂದ ಕಲಿಕೆ ಹಾಗೂ ಫಲಿತಾಂಶದಲ್ಲಿ ಮುನ್ನಡೆ ಸಾಧಿಸುವ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net