ಶಿಕ್ಷಣ ಪ್ರೇಮಿ ಅಣ್ಣಿಗೇರಿ ಗುರುಗಳ ಬದುಕು ಸ್ಮರಣೀಯ

13-GDG-1
Published on

ವಿಜಯವಾಣಿ ಸುದ್ದಿಜಾಲ ಗದಗ

ಶಿಕ್ಷಕ ವೃತ್ತಿ ಆರಂಭದಿಂದ ಬದುಕಿನ ಕೊನೆ ಕ್ಷಣದವರೆಗೂ ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ತ್ಯಾಗಜೀವಿ, ಶಿಕ್ಷಣ ಪ್ರೇಮಿ ಅಣ್ಣಿಗೇರಿ ಗುರುಗಳ ಬದುಕು ಸ್ಮರಣೀಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಸ್ಥಳೀಯ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಸೋಮವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುವ ಕಾರ್ಯಕ್ರಮ ಹಾಗೂ ಅಣ್ಣಿಗೇರಿ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಣ್ಣಿಗೇರಿ ಗುರುಗಳು ಮಾನವೀಯ ಗುಣಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಪ್ರೇರಣಾ ಶಕ್ತಿಯಾಗಿ ಬದುಕಿದವರು. ಅವರು ಶಿಕ್ಷಕ ವೃತ್ತಿ ಆರಂಭಿಸಿದ ದಿನದಿಂದ ನಿವೃತ್ತಿಯ ನಂತರವೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಆಶ್ರಯ ನೀಡಿದ್ದರು. ಅವರ ಆದರ್ಶ ಗುಣಗಳನ್ನು ಯುವ ಪೀಳಿಗೆ ಹಾಗೂ ಶಿಕ್ಷಕರು ಅಳವಡಿಸಿಕೊಳ್ಳಬೇಕಿದೆ ಎಂದರು.

ಅಣ್ಣಿಗೇರಿ ಗುರುಗಳ ಆಶ್ರಮವನ್ನು ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಹಾಗೂ ಶಿಕ್ಷಣ ಮುಂದುವರಿಸಿಕೊಂಡು ಹೋಗುವ ಕಾರ್ಯ ನಿರಂತರವಾಗಿ ಸಾಗಬೇಕಿದೆ. ಅಣ್ಣಿಗೇರಿ ಗುರುಗಳ ಪ್ರತಿಷ್ಠಾನದ ಜತೆಗೆ ಅವರ ಶಿಷ್ಯ ವರ್ಗ ಯೋಜನೆ ರೂಪಿಸುವ ಮೂಲಕ ಗುರುಗಳ ಹೆಸರನ್ನು ಸದಾಕಾಲ ಸ್ಮರಣೀಯವಾಗಿಸಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಅವಕಾಶ ವಂಚಿತರಿಗೆ, ಬಡ ಮಕ್ಕಳಿಗೆ ಶಿಕ್ಷಣದ ಜತೆಗೆ ಮೂಲಸೌಲಭ್ಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದು ಹೇಳಿದರು.

ಅಣ್ಣಿಗೇರಿ ಗುರುಗಳ ಶಿಷ್ಯರಾದ ಡಾ. ಶರಣಬಸವ ಚೌಕಿಮಠ, ಡಾ. ಬಸವರಾಜ ತಳವಾರ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ವಿರೂಪಾಕ್ಷಪ್ಪ ಮ್ಯಾಗೇರಿ, ಉಪಾಧ್ಯಕ್ಷ ಮಹಾದೇವಪ್ಪ ಗೌರಿಪೂರ, ರವಿ ದಂಡಿನ, ಶಿವಕುಮಾರ ಪಾಟೀಲ, ಬಸವರಾಜ ಬಿಂಗಿ, ಗಂಗಾಧರಸ್ವಾಮಿ ಹಿರೇಮಠ, ಡಾ. ಎಸ್.ಬಿ. ಶೆಟ್ಟರ್, ಶಂಕ್ರಣ್ಣ ಅಣ್ಣಿಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net