ಶ್ರೀಮಂತ ಪಂಚಾಯಿತಿಯಲ್ಲಿ ಅಭಿವೃದ್ಧಿ ನಗಣ್ಯ

anneshvara
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ರಾಜ್ಯದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಕೀರ್ತಿ ಇದ್ದರೂ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾತ್ರ ಕುಂಠಿತವಾಗಿದೆ ಎಂದು ಗ್ರಾಪಂ ನೂತನ ಅಧ್ಯಕ್ಷೆ ಜಿ.ಉಮಾಮುನಿರಾಜು ಹೇಳಿದರು.
ತಾಲೂಕಿನ ಅಣ್ಣೇಶ್ವರ ಗ್ರಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧ್ಯಕ್ಷರು, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದ್ದು, ರಾಜಕಿಯ ಮೇಲಾಟ, ಹಗ್ಗಜಗ್ಗಾಟ ಹಾಗೂ ಸತತವಾಗಿ ಪಿಡಿಒಗಳ ವರ್ಗಾವಣೆಯಿಂದಾಗಿ ಹಿಂದಿನ ಅವಧಿಗಳಲ್ಲಿ ನಿರೀಕ್ಷತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.
ಪ್ರಮುಖವಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ, ನಿವೇಶನ ರಹಿತ ಬಡವರಿಗೆ ಹಂಚಿಕೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಗ್ರಾಮಗಳ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗುವುದು. ಈ ಮೂಲಕ ನಮ್ಮ ಅವಧಿಯಲ್ಲಿ ಮತ್ತೊಮ್ಮೆ ಗಾಂಧಿ ಗ್ರಾಮ ಪುರಸ್ಕಾರ ಪಡೆಯಬೇಕೆಂಬ ಗುರಿ ಇದೆ ಎಂದರು.
ಮಾಜಿ ಅಧ್ಯಕ್ಷ ಎ.ಚಂದ್ರಶೇಖರ್ ಮಾತನಾಡಿ, ಏಳೂವರೆ ವರ್ಷಗಳಿಂದ ಜೆಡಿಎಸ್ ಆಡಳಿತ ಅವಧಿಯಲ್ಲಿ ಯಾವ ಅಭಿವೃದ್ಧಿ ಕೆಲಸ ಆಗದ ಹಿನ್ನೆಲೆಯಲ್ಲಿ ಕೆಲ ಜೆಡಿಎಸ್ ಬೆಂಬಲಿತ ಸದಸ್ಯರು ಈಗ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಎಲ್ಲರೂ ರಾಜಕೀಯ ಬದಿಗೊತ್ತಿ ಗ್ರಾಮಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಒಮ್ಮತದಿಂದ ಕೆಲಸ ಮಾಡಲಾಗುವುದು ಎಂದರು.
ಪಿಡಿಒ ಗಂಗರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂವನಹಳ್ಳಿ ಮುನಿರಾಜು, ಸದಸ್ಯರಾದ ಜಯಮ್ಮ, ವಿ.ಪ್ರಭಾವತಿ, ಗೋಪಾಲ, ನಳಿನಾ ಮುನಿರಾಜು, ಮುನಿಲಕ್ಷ್ಮಮ್ಮ, ಶಿಲ್ಪಾ, ರಾಜಣ್ಣ, ವೆಂಕಟೇಶ್, ಲಕ್ಷ್ಮೀ ಮುರಳಿ, ಬಿ.ಕೆ.ಮುನಿಯಪ್ಪ, ಆರ್.ಮಂಜುನಾಥ, ಮುಕುಂದ, ಮಾಜಿ ಪುರಸಭೆ ಅಧ್ಯಕ್ಷ ಎಂ.ನಾರಾಯಣಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net