

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಲಾಕ್‌ಡೌನ್ ಸಡಿಲಿಕೆ ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನದ ಚಟುವಟಿಕೆಗಳು ಗರಿಗೆದರಿದ್ದು, ಆರ್ಥಿಕ ಸ್ಥಿತಿಯಲ್ಲಿಯೂ ಚೇತರಿಕೆ ಕಾಣುತ್ತಿದೆ.
2020ರ ವರ್ಷಾಚರಣೆ ಸಂಭ್ರಮದ ವೇಳೆ ಬರೋಬ್ಬರಿ 23 ಸಾವಿರ ಪ್ರವಾಸಿಗರನ್ನು ಸ್ವಾಗತಿಸಿ ದಾಖಲೆ ನಿರ್ಮಿಸಿದ್ದ ಉದ್ಯಾನ ದಿನವೊಂದಕ್ಕೆ 5 ರಿಂದ 10 ಸಾವಿರ, ವಾರಾಂತ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರನ್ನು ಸ್ವಾಗತಿಸುತ್ತಿತ್ತು. ಆದರೆ ಮಾರ್ಚ್ ಅಂತ್ಯದಲ್ಲಿ ಲಾಕ್‌ಡೌನ್‌ನಿಂದಾಗಿ ಸುಮಾರು 7.5 ಕೋಟಿ ರೂ. ನಷ್ಟ ಅನುಭವಿಸಿತ್ತು. ಲಾಕ್‌ಡೌನ್ ಸಡಿಲಿಕೆ ಬಳಿಕೆ ನಿಧಾನವಾಗಿ ಸುಧಾರಣೆ ಕಾಣುತ್ತಿರುವ ಉದ್ಯಾನ ಸೆಪ್ಟೆಂಬರ್‌ನಲ್ಲಿ ಚೇತರಿಕೆ ಕಂಡಿದೆ. ದಿನವೊಂದಕ್ಕೆ 600 ರಿಂದ ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದು, ವಾರಾಂತ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿರುವುದಾಗಿ ಉದ್ಯಾನ ಕಾರ್ಯನಿರ್ವಹಣಾ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಉದ್ಯಾನಕ್ಕೆ ಭೇಟಿ ನೀಡಲು ಆತಂಕಪಡುತ್ತಿದ್ದ ಪ್ರವಾಸಿಗರು ನಿಧಾನವಾಗಿ ಆಕರ್ಷಿತರಾಗುತ್ತಿದ್ದಾರೆ. ಈ ಹಿಂದೆ ಏಕಕಾಲಕ್ಕೆ ಸಾವಿರಾರು ಮಂದಿಯ ಪ್ರವೇಶಕ್ಕೆ ಅವಕಾಶವಿತ್ತು. ಈಗ ಪ್ರತಿದಿನ 4,400 ಮಂದಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಸರಾಸರಿ ಲೆಕ್ಕದಲ್ಲಿ ಪ್ರಸ್ತುತ 2800 ಮಂದಿ ಉದ್ಯಾನಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಸಿರಿನ ಕಾಡು: ಮಳೆಯಿಂದಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬೇಸಿಗೆಯಲ್ಲಿ ಒಣಗಿದಂತೆ ಕಾಣುವ ಸಂರಕ್ಷಿತ ಅರಣ್ಯ, ಈ ಬಾರಿ ಹಸಿರು ಹೊದ್ದು ಮಲಗಿದೆ. ಇದರೊಂದಿಗೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚಾಗಿದ್ದು, 24 ಸಿಂಹ, 19 ಹುಲಿ ಹಾಗೂ 25 ಆನೆಗಳು ಪ್ರವಾಸಿಗರನ್ನು ಎದುರುಗೊಳ್ಳಲಿವೆ. ಸಾರಿ ವೀಕ್ಷಣೆಗೆ ಇದು ಉತ್ತಮ ಕಾಲಾವಧಿ ಎನ್ನಲಾಗಿದ್ದು, ಜೈವಿಕ ಉದ್ಯಾನಕ್ಕೆ ಭೇಟಿ ನೀಡುವವರಲ್ಲಿ ಹೆಚ್ಚು ಮಂದಿ ಸಾರಿಗೆ ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಉದ್ಯಾನದ ಚಟುವಟಿಕೆಗಳು ಪುನರಾರಂಭಗೊಂಡಿದ್ದು, ಸಾಕಷ್ಟು ಚೇತರಿಕೆ ಕಂಡಿದೆ, ಪ್ರವಾಸಿಗರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವಾರಕ್ಕೆ ಸರಾಸರಿ 4 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ದಸರಾ ವೇಳೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಕರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವನಶ್ರೀ ವಿಪಿನ್‌ಸಿಂಗ್, ಕಾರ್ಯನಿರ್ವಹಣಾ ನಿರ್ದೇಶಕಿ