ಕುಸುಮಲಂಕಾರದಿಂದ ಕಂಗೊಳಿಸಿದ ಅನ್ನಪೂರ್ಣೇಶ್ವರಿ ಸನ್ನಿಧಿ

kls temple
ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಹೂವಿನ ಅಲಂಕಾರ.
Published on

ಕಳಸ: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಷಾಢದ ಮೊದಲನೇ ಶುಕ್ರವಾರ ಹೂವಿನ ಅಲಂಕಾರದೊಂದಿಗೆ ಭಕ್ತರನ್ನು ಆಕರ್ಷಿಸಿತು. ಹೂ, ಹಣ್ಣು, ವಿದ್ಯುತ್ ದೀಪಗಳ ಶೃಂಗಾರದಿಂದ ಅನ್ನಪೂರ್ಣೇಶ್ವರಿ ದೇವಾಲಯ ಕಣ್ಮನ ಸೆಳೆಯುತ್ತಿದೆ.

ಬಹುತೇಕ ದೇವಸ್ಥಾನಗಳಲ್ಲಿ ಆಷಾಢ ಮಾಸ ಬಂತೆಂದರೆ ಭಕ್ತರ ಸಂಖ್ಯೆ ಇಳಿಮುಖವಾಗುತ್ತದೆ. ಹರಕೆ ಸಲ್ಲಿಕೆಯೂ ಕಡಿಮೆ ಇರುತ್ತದೆ. ಆದರೆ ಹೊರನಾಡು ಅನ್ನಪೂರ್ಣೇಶ್ವರಿಯ ಸನ್ನಿಧಿ ತರಹೇವಾರಿ ಹೂಗಳಿಂದ ಕಂಗೊಳಿಸುತ್ತದೆ.
ಆಷಾಢ ಮಾಸದ ಶುಕ್ರವಾರ ಇಲ್ಲಿ ಭಕ್ತರ ದಂಡೇ ನೆರೆದಿತ್ತು. ಹೊರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ, ಪಾರಾಯಣ, ಕುಂಕುಮಾರ್ಚನೆ, ಅನ್ನದಾನ, ಅನ್ನಪ್ರಾಷನ, ನಾಮಕರಣ ಹೀಗೆ ನಾನಾ ಸೇವೆಗಳು ನಡೆದವು. ಭಕ್ತರು ಲಕ್ಷಗಟ್ಟಲೆ ರೂಪಾಯಿ ವೆಚ್ಚದಲ್ಲಿ ಹೂವಿನ ಸೇವೆ ಮಾಡುತ್ತಿದ್ದಾರೆ. ಇಲ್ಲಿ ಆಷಾಢ ಮಾಸದ ವಿಶೇಷ ಇದಾಗಿದೆ. ಹೂವಿನ ವ್ಯಾಪಾರಸ್ಥರು, ಹೂವಿನ ಅಲಂಕಾರ ಮಾಡುವವರು ಬಂದು ದೇವಸ್ಥಾನಪೂರ್ತಿ ಹೂವಿನ ಅಲಂಕಾರ ಮಾಡಿ ಸೇವೆ ಮಾಡಿದ್ದಾರೆ.
ಪ್ರತಿ ವರ್ಷ ಆಷಾಢ ಮಾಸದಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದರು. ಈ ವರ್ಷ ಮೊದಲ ಬಾರಿ ವಿದ್ಯುತ್ ದೀಪಗಳ ಅಲಂಕಾರ ಕೂಡ ಮಾಡಲಾಗಿದೆ. ಸುಮಾರು ಒಂದು ಕಿ.ಮೀ ದೂರದಿಂದ ರಸ್ತೆಯ ಇಕ್ಕೆಲಗಳಲ್ಲಿ ದೀಪಾಲಂಕಾರ ಮಾಡಿದ್ದು, ಇಡೀ ದೇವಸ್ಥಾನವನ್ನು ಗಂಧರ್ವಲೋಕದಂತೆ ಸಿಂಗಾರ ಮಾಡಲಾಗಿದೆ. ಸುಮಾರು 100 ಜನರ ತಂಡ ವಿದ್ಯುತ್ ದೀಪದ ಅಲಂಕಾರದಲ್ಲಿ ಕೈಚಳಕ ತೋರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net