

ಗೋಕರ್ಣ: ಆಷಾಢ ಪೌರ್ಣಿಮೆ ಸೋಮವಾರದಿಂದ ಪ್ರಾರಂಭವಾಗಲಿರುವ ಸಂಘಟನಾ ಚಾತುರ್ಮಾಸ್ಯ ನಿಮಿತ್ತ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಭಾನುವಾರ ಪಾಕಶಾಲೆಯಲ್ಲಿ ಅನ್ನಪೂರ್ಣೇಶ್ವರಿ ಪೂಜೆ ನೆರವೇರಿಸಿದರು.
ಚಾತುರ್ಮಾಸ್ಯ ಪುಣ್ಯಪರ್ವಕ್ಕೆ ಆಗಮಿಸುವ ಸಕಲ ಶಿಷ್ಯಭಕ್ತರಿಗೆ ಮೂರು ತಿಂಗಳ ಪರ್ಯಂತ ಸುವ್ಯವಸ್ಥಿತವಾಗಿ ಶುಚಿ-ರುಚಿಯ ಪ್ರಸಾದ, ಭೋಜನ ನಡೆಯುವಂತೆ ಅನ್ನಪೂರ್ಣೇಶ್ವರಿಯ ಅನುಗ್ರಹಕ್ಕೆ ಪ್ರಾರ್ಥಿಸಿದರು.ತರುವಾಯ ಶ್ರೀಗಳು ಪಾಕಶಾಲೆ, ಉಗ್ರಾಣ ಮತ್ತು ಭೋಜನಶಾಲೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿ ಆಗಬೇಕಾದ ವ್ಯವಸ್ಥೆಗಳ ಕುರಿತು ಸೂಚಿಸಿದರು.
ಸಮಿತಿ ಗೌರವಾಧ್ಯಕ್ಷ ಡಿ.ಡಿ. ಶರ್ಮಾ, ಅಧ್ಯಕ್ಷ ಯು.ಎಸ್. ಗಣಪತಿ ಭಟ್ಟ, ಕಾರ್ಯಾಧ್ಯಕ್ಷ ಮಂಜುನಾಥ ಹೆಗಡೆ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ವಿಷ್ಣುಗುಪ್ತ ವಿಶ್ವ ವಿದ್ಯಾಲಯ ಆಡಳಿತಾಧಿಕಾರಿ ಪ್ರಸನ್ನಕುಮಾರ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ ಗೋಳಗೋಡ, ಪ್ರಶಾಸನಾಧಿಕಾರಿ ಸಂತೊಷ ಹೆಗಡೆ, ವಿತ್ತಾಧಿಕಾರಿ ಜಿ.ಎಲ್. ಗಣೇಶ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಅರವಿಂದ ದರ್ಬೆ, ನಿಯೋಜಿತ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಜನಸಂತೋಷ ವಿಭಾಗದ ಸುಬ್ರಾಯ ಭಟ್ಟ ಮೂರೂರು, ಸುವಸ್ತು ವಿಭಾಗ ಮುಖ್ಯಸ್ಥ ರಾಮಚಂದ್ರ ಅಜ್ಜಕಾನ ಮತ್ತು ಪಾಕ ಪ್ರವೀಣ ಸುಬ್ರಾಯ ಭಟ್ಟ ಇದ್ದರು.
ಶ್ರೀಗಳ ವ್ಯಾಸಪೀಠಾರೋಹಣ: ಸೋಮವಾರ ಬೆಳಗ್ಗೆ ಶ್ರೀಗಳು ಶ್ರೀವ್ಯಾಸ ಮಹರ್ಷಿಗಳ ಪೂಜೆ ನೆರವೇರಿಸಿ ನಂತರ ಮಧಾಹ್ನ 12.15ಕ್ಕೆ ನಡೆಯುವ ಧರ್ಮಸಭೆಯಲ್ಲಿ ಶ್ರೀಗಳು ಶ್ರೀವ್ಯಾಸ ಪೀಠಾರೋಹಣ ಮಾಡಿ ಸಮಸ್ತ ಶಿಷ್ಯಭಕ್ತರಿಗೆ ಚಾತುರ್ಮಾಸ್ಯ ಸಂದೇಶ ದಯಪಾಲಿಸಿ ಆಶೀರ್ವದಿಸಲಿದ್ದಾರೆ. ಧರ್ಮಸಭೆಯಲ್ಲಿ ಶ್ರೀಗಳು ಬಂದಗದ್ದೆ ನಾಗರಾಜ ರಚಿಸಿರುವ ಶ್ರೀಮದಾತ್ಮಲಿಂಗಮ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.