

ಕಳಸ: ನವರಾತ್ರಿ ಆರನೇ ದಿನ ಮಂಗಳವಾರ ಹೊರನಾಡಿನ ಮಾತೆ ಅನ್ನಪೂರ್ಣೇಶ್ವರಿಯು ದುರ್ಗೆಯ ಆರನೇ ಅಲಂಕಾರವಾದ ಮಯೂರಾರೂಢ ಕಾತ್ಯಾಯಿನಿಯಾಗಿ ಕಂಗೊಳಿಸಿದಳು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಪ್ತಶತಿ ಪಾರಾಯಣ, ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಕುಂಕುಮಾರ್ಚನೆ ಮತ್ತು ಶ್ರೀ ಸರಸ್ವತಿ ಮೂಲಮಂತ್ರ ಹೋಮ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ವಿದುಷಿ ಉಮಾದೇವಿ ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ ನರ್ತನಾ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸುಧಾ ಶ್ರೀಧರ್ ಮತ್ತು ತಂಡದಿಂದ ಕೂಚಿಪುಡಿ ನೃತ್ಯ ನಡೆಯಿತು. ಅ.9ರಂದು ದೇವಿಗೆ ಅಶ್ವಾರೂಢಾ ಗೌರಿ ಅಲಂಕಾರ ಪೂಜೆ, ಶ್ರೀ ವಾಗೀಶ್ವರೀ ಮೂಲಮಂತ್ರ ಹೋಮ ಮತ್ತು ಶ್ರೀ ಶಾರದಾ ಪೂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಭಕ್ತಿ ಸಂಗೀತ, ಸಂಜೆ ಯಕ್ಷಗಾನ ನಡೆಯಲಿದೆ.