

ಬಾದಾಮಿ: ತಾಲೂಕಿನ ಬೇಲೂರ ಗ್ರಾಮದ ರಥ ಬೀದಿಯಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವ ಮಂಗಳವಾರ ಸಂಜೆ ಮಳೆಯ ಮಧ್ಯೆಯೂ ಸಂಭ್ರಮದಿಂದ ನಡೆಯಿತು.
ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ರಭಸವಾಗಿ ಮಳೆ ಸುರಿದು ರಥಬೀದಿ ತುಂಬೆಲ್ಲಾ ನೀರು ಹರಿಯುತ್ತಿದ್ದರೂ ಮಳೆಯನ್ನು ಲೆಕ್ಕಿಸದೆ ಅನ್ನದಾನೇಶ್ವರ ಮಹಾರಾಜ ಕೀ ಜೈ ಎಂದು ಉತ್ಸಾಹದಿಂದ ರಥ ಎಳೆದು ಭಕ್ತಿ ಭಾವ ಮೆರೆದರು.
ಅಜ್ಜನ ಆಶೀರ್ವಾದವೊಂದು ಇದ್ದರೆ ಸಾಕು ಎಲ್ಲವೂ ಸರಳವಾಗಿ ನಡೆಯುತ್ತವೆ ಎಂಬುದು ಭಕ್ತರ ಅಪಾರ ನಂಬಿಕೆ. ಅವರ ಮೇಲೆ ಇರುವ ಪ್ರೀತಿ. ಭಕ್ತಿ ಅಜಾರಾಮರವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಸಮೂಹ ರಥಕ್ಕೆ ಹಣ್ಣು ಉತ್ತತಿ ಎಸೆದು ಕೈ ಮುಗಿದು ನಮಿಸಿದರು. ಶೋಭಕೃತುನಾಮ ಸಂವತ್ಸರ(ಬಸವ ಶೆಕೆ 892) ಬೆಳಗ್ಗೆ ಕತೃ ಗದ್ದುಗೆಗೆ ಮಹಾರುದ್ದಾಭಿಷೇಕ, ಸಹಸ್ರ ಬಿಲ್ವಾರ್ಚನೆ, ನಡೆಯಿತು.
ರಥೋತ್ಸವದಲ್ಲಿ ಜಾಲಿಹಾಳದ ಭಕ್ತರಿಂದ ತೇರಿನ ಹಗ್ಗದ ಸೇವೆ, ಹೊಳೆಹಡಗಲಿ ಗ್ರಾಮದಿಂದ ಕಲಶ ಸೇವೆ ನಡೆಯಿತು. ಬೇಲೂರಿನ ಬಸವೇಶ್ವರ ಭಜನಾ ಸಂಘ, ಡೊಳ್ಳಿನ ಮೇಳ, ಕರಡಿ ಮಜಲು, ಶಿರಬಡಗಿ ಭಜನಾ ಸಂಘ, ಮಂಗಳೂರು, ಜಾಲಿಹಾಳದ ಹಲಗಿ ಮೇಳ, ಹಿರೇಹಾಳ, ಬೊಮ್ಮಸಾಗರ, ಢಾಣಕಶಿರೂರ, ಭಜನಾ ಸಂಘಗಳು, ಝಾಂಜ್ ಮೇಳ, ಹಿರೇನಸಬಿ, ಚೊಳಚಗುಡ್ಡ, ನವಿಲುಹೊಳೆ, ಚಿಕ್ಕನಸಬಿ, ಗೋನಾಳ, ಮಂಗಳೂರು, ನೈನಾಪುರ, ಬೇಲೇರಿ, ಬಸರಕೋಡ, ಮಣ್ಣೇರಿ, ನೆಲ್ಲೂರು ಮಾಡಲಗೇರಿ ಕೋತಬಾಳ ಹೊನ್ನಿಗನೂರ, ಭಜನಾ ಸಂಘ ಸೇರಿ ವಿವಿಧ ಗ್ರಾಮಗಳಿಂದ ಭಕ್ತರು ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಸಂಚರಿಸಿತು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಕಣ್ತುಂಬಿಕೊಂಡರು.
ಬೇಲೂರ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ ಉಪಾಧ್ಯಕ್ಷರು ಸದಾಶಿವ ಮಹಾಸ್ವಾಮಿಗಳು, ನೇರಡಗುಂಬ ಪಶ್ವಿಮಾದ್ರಿ ಸಂಸ್ಥಾಮಠದ ಪಂಚಮಸಿದ್ಧಲಿಂಗೇಶ ಮಹಾಸ್ವಾಮಿಗಳು, ಮಣಕವಾಡ ಅನ್ನದಾನೇಶ್ವರ ವೇದ ಮಂದಿರದ ಮೃತ್ಯುಂಜಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು.
ಗುಳೇದಗುಡ್ಡ ಮರಡಿಮಠದ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು, ಧರೂರ ಸಂಗನಬಸವ ವೀರಕ್ತಮಠದ ಕೊಟ್ಟೂರು ಮಹಾಸ್ವಾಮಿಗಳು, ನಿಡಗೊಂದಿಕೊಪ್ಪ ಶಿವಯೋಗಮಂದಿರ ಶಾಖಾಮಠದ ಚನ್ನಬವಸ ಮಹಾಸ್ವಾಮಿಗಳು, ಖೇಳಗಿ ವೀರಕ್ತಮಠದ ಶಿವಲಿಂಗ ಮಹಾಸ್ವಾಮಿಗಳು, ನಾಗಲಾಪುರ ವಿರಕ್ತಮಠದ ನಿರಂಜನ ಪ್ರಭು ದೇವರು, ಸೋಮಸಮುದ್ರ ವೀರಕ್ತಮಠದ ಸಿದ್ಧಲಿಂಗ ದೇವರು, ಬೂದಗುಂಪಾ ವಿರಕ್ತಮಠದ ವಿಜಯ ಪ್ರಭು ದೇವರು, ಸಂಗನಾಳ-ಬನವಾಶಿಯ ಶಿವಲಿಂಗ ದೇಶಿಕರು, ವಿಶ್ವೇಶ್ವರ ದೇವರು, ಘೋಡಗೇರಿ ವಿರಕ್ತಮಠದ ಪ್ರಭುಲಿಂಗ ಮಹಾಸ್ವಾಮಿಗಳು ಸೇರಿ ಬೇಲೂರು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮೂಹ ಪಾಲ್ಗೊಂಡಿತ್ತು. ಸೆ.30 ರಂದು ಕಲಶಾರೋಹಣ ನಡೆಯಲಿದೆ.