

ಮಡಿಕೇರಿ: ಮಾರ್ಚ್ ತಿಂಗಳಲ್ಲಿ ಅನ್ನಭಾಗ್ಯ ಅಕ್ಕಿಯು ಜನರಿಗೆ ದೊರೆಯಲಿದೆ ಎಂದು ಗ್ಯಾರಂಟಿ ಯೋಜನೆಯ ವಿರಾಜಪೇಟೆ ತಾಲೂಕು ಅಧ್ಯಕ್ಷ ಜಾನ್ಸನ್ ತಿಳಿಸಿದರು.
ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತಿತ್ತು. ಮಾರ್ಚ್ ತಿಂಗಳಿನಿಂದ ಅನ್ನಭಾಗ್ಯ ಅಕ್ಕಿಯನ್ನು ವಿತರಿಸಲಾಗುವುದು. ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿದ್ದು ಕೂಡಲೇ ಬಗೆಹರಿಸಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ೧ ಕೆ.ಜಿ.ಅಕ್ಕಿಗೆ ಹೆಚ್ಚುವರಿ ಹಣವನ್ನು ಪಡೆಯುತ್ತಿರುವ ಪ್ರಕಣಗಳು ಕಂಡುಬರುತ್ತಿದ್ದು ಅಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸಲು ತಿಳಿಸಿದರು. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗುವುದು ಕಂಡುಬಂದರೆ ಅಂತಹ ಕುಟುಂಬದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಾ.ಪಂ.ಇ.ಒ.ಅಪ್ಪಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಲು ಹಲವು ರೀತಿಯಲ್ಲಿ ಸಹಾಯಕವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ತಾ.ಪಂ.ಇ.ಒ ಕೆ.ಸಿ.ಅಪ್ಪಣ್ಣ, ಗ್ಯಾರಂಟಿ ಯೋಜನೆಯ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.