

ಉಪ್ಪಿನಬೆಟಗೇರಿ: ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೊಷಣೆ ಮಾಡಿದಂತೆ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಯೋಜನೆಯಡಿ 10 ಕಿಲೋ ಅಕ್ಕಿಯಲ್ಲಿ 5 ಕೆಜಿ ಅಕ್ಕಿ ನೀಡಿ ಉಳಿದ 5 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 34 ರೂ.ನಂತೆ ಒಟ್ಟು 170 ರೂ. ನೀಡುತ್ತಿದೆ.
ಅನ್ನಭಾಗ್ಯದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಇಲ್ಲವೆ, ಪೋಸ್ಟ್ ಖಾತೆಗೆ ನೇರವಾಗಿ ಜಮೆ ಮಾಡುತ್ತಿದೆ. ಹೀಗಾಗಿ ಖಾತೆ ಹೊಂದಿರುವ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಮುಂದೆ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಹಣ ಜಮೆಯಾದ ಬಗ್ಗೆ ಪಾಸ್ಬುಕ್ ನೋಂದಣಿಗಾಗಿ ಮುಗಿಬಿದ್ದಿದ್ದಾರೆ. ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಈ ಸಂಘದ ವ್ಯಾಪ್ತಿಗೆ ಹನುಮನಾಳ, ಹನುಮನಕೊಪ್ಪ, ಸೈಬನಕೊಪ್ಪ ಹಾಗೂ ಉಪ್ಪಿನಬೆಟಗೇರಿ ಗ್ರಾಮಗಳು ಸೇರಿ ಒಟ್ಟು 2400ಕ್ಕೂ ಅಧಿಕ ಪಡಿತರ ಚೀಟಿಗಳಿವೆ. ಈ ಎಲ್ಲ ಪಡಿತರ ಚೀಟಿದಾರರಿಗೆ ಪಿಕೆಪಿಎಸ್ ಸಂಘದವರು ಆಧಾರ ಲಿಂಕ್, ಇ-ಕೆವೈಸಿ ಮಾಡಿಸಲು ಮುಂಚಿತವಾಗಿ ಡಂಗುರ ಸಾರಿದ್ದರು. ಆದರೆ, ಅವರಲ್ಲಿ 350 ಜನರು ಅನಿವಾರ್ಯ ಕಾರಣಗಳಿಂದ ಖಾತೆಗಳಿಗೆ ಲಿಂಕ್ ಮಾಡಿಸಿರಲಿಲ್ಲ.
ಅಂಥವರ ಯಾದಿ ತಯಾರಿಸಿದ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿಗೆ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ, ಈ ಎಲ್ಲ ಪಡಿತರ ಚೀಟಿದಾರರು ತಾವು ತೆರೆದ ಉಳಿತಾಯ ಖಾತೆಗೆ ಲಿಂಕ್ಗಾಗಿ ಆಧಾರ, ಪ್ಯಾನ್ ಕಾರ್ಡ್ ಜೊತೆಗೆ ಇ-ಕೆವೈಸಿ ಮಾಡಿಸಲು ಬ್ಯಾಂಕ್ ಹಾಗೂ ಪಿಕೆಪಿಎಸ್ ಕಚೇರಿ ಮುಂದೆ ನಿಲ್ಲಬೇಕಾಗಿದೆ.
ಸ್ಥಳೀಯ ಅಂಚೆ ಕಚೇರಿ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ಪಿಕೆಪಿಎಸ್ ಸಂಘದಲ್ಲಿ 500 ರೂ.ಗಳ ಉಳಿತಾಯ ಖಾತೆ ತೆರೆಯುತ್ತಿದ್ದಾರೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಖಾತೆ ತೆರೆಯಲು ಬಂದವರು ಸಂತಸಪಡುತ್ತಿದ್ದಾರೆ. ಅಂಚೆ ಹಾಗೂ ಬ್ಯಾಂಕ್ ಸಿಬ್ಬಂದಿ ಬೇಸರಪಟ್ಟುಕೊಳ್ಳದೆ, ಸೌಜನ್ಯದಿಂದ ಖಾತೆಗೆ ನೋಂದಣಿ ಮಾಡಿಕೊಡುತ್ತಿದ್ದಾರೆ.
ಪಡಿತರ ಚೀಟಿ ಹೊಂದಿರುವವರು ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆ ಕಡ್ಡಾಯವಾಗಿದೆ. ಅಕೌಂಟ್ಗೆ ಆಧಾರ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಮಾಡಿರಬೇಕು. ಪಡಿತರ ಅಂಗಡಿಯಲ್ಲಿ ಇ-ಕೆವೈಸಿ ಮಾಡಿರುವವರ ಖಾತೆಗೆ ನೇರವಾಗಿ ಅನ್ನ ಭಾಗ್ಯದ ಹಣ ಜಮೆಯಾಗುತ್ತದೆ. ಹಣ ಜಮೆಯಾಗದವರು ಪಡಿತರ ಅಂಗಡಿಯಲ್ಲಿ ಲಿಸ್ಟ್ ಇದ್ದು, ಅದರಲ್ಲಿ ತಮ್ಮ ಹೆಸರಿನೊಂದಿಗೆ ಹಣ ಜಮೆಯಾಗದ ಕಾರಣವು ಇದ್ದು, ಅದನ್ನು ಗಮನಿಸಿ ಸರಿಪಡಿಸಿಕೊಳ್ಳಬೇಕು. | ಕೆ.ಎಂ. ಜೋಶಿ ಆಹಾರ ನಿರೀಕ್ಷಕ, ಧಾರವಾಡ