

ಬೆಳಗಾವಿ: ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ಆಹಾರದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಏಳು ದಿನಗಳಿಂದ ಆಹಾರ ವಿತರಿಸುತ್ತಿರುವ ಬಿಜೆಪಿ ಕಾರ್ಯಕರ್ತರ ಕಾರ್ಯಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಡುಗೆ ತಯಾರಿಸುವ ಮಹಾಂತೇಶ ನಗರದ ಮಹಾಂತಭವನ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದ ಬಳಿಕ ಮಾತನಾಡಿ, ಕಾರ್ಮಿಕರಿಗೆ, ಬಡವರಿಗೆ ಇಂತಹ ಸಂದರ್ಭದಲ್ಲಿ ಆಹಾರ ವಿತರಣೆ ಮಾಡುತ್ತಿರುವುದು ಮಾದರಿಯಾಗಿದೆ. ಜನ ಹಸಿವಿನಿಂದ ಬಳಲದಂತೆ ಕಾರ್ಯಕರ್ತರು ಜಾಗ್ರತಿ ವಹಿಸಿ ಆಹಾರ ತಲುಪಿಸಬೇಕು ಎಂದು ಸಲಹೆ ನೀಡಿದರು.
ಪಕ್ಷದ ಕಾರ್ಯಕರ್ತರು ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಹಾಗೂ ವಿವಿಧ ಕಡೆಯಿಂದ ವಲಸೆ ಬಂದಿರುವ ಜನರಿಗೆ ಲಾಕ್‌ಡೌನ್ ಮುಗಿಯುವವರೆಗೂ ಆಹಾರ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ನಗರದಲ್ಲಿಯೇ ಉಳಿದುಕೊಂಡಿರುವ ಕಾರ್ಮಿಕರಿಗೆ ಆಹಾರ ವಿತರಿಸುತ್ತಿದ್ದೇವೆ. ನಿತ್ಯ ಕನಿಷ್ಠ 2,500 ಜನರಿಗೆ ಆಹಾರ ವಿತರಣೆ ಮಾಡುತ್ತಿದ್ದೇವೆ. ಕೆಲವರು ಅಡುಗೆ ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಕೆಲವೆಡೆ ಬಡವರ, ಕಾರ್ಮಿಕರ ಮನೆ ಮನೆಗೆ ತೆರಳಿ ಆಹಾರ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಿತ್ಯ ಸಾವಿರಾರು ಜನರಿಗೆ ಆಹಾರ ವಿತರಣೆ ಮಾಡುವ ಉದ್ದೇಶದಿಂದ ಅಡುಗೆ ಮಾಡಲು, ತರಕಾರಿ ತರಲು, ಬಡವರು, ನಿರ್ಗತಿಕರು, ಕಾರ್ಮಿಕರಿಗೆ ಆಹಾರ ವಿತರಣೆ ಮಾಡಲು ಕಾರ್ಯಕರ್ತರ 4 ತಂಡ ರಚನೆ ಮಾಡಲಾಗಿದೆ. ಈ ತಂಡಗಳು ಬೆಳಗ್ಗೆ 7 ರಿಂದ ರಾತ್ರಿವರೆಗೆ ಶ್ರಮಿಸುತ್ತಿವೆ ಎಂದು ಸಚಿವರಿಗೆ ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಮಹಾನಗರ ಘಟಕದ ಉಪಾಧ್ಯಕ್ಷ ಸದಾನಂದ ಗುಂಟೆಪ್ಪನವರ, ಹಿರಯ್ಯ ಖೋತ, ವಿಲಾಸ ಕೇರೂರ, ಸಂತೋಷ ಚಿಕ್ಕೋಡಿ, ಮಹಾಂತೇಶ ವಕ್ಕುಂದ, ಪ್ರಶಾಂತ ದೇವರಮನಿ ಇತರರು ಇದ್ದರು.