

ಅಜ್ಜಂಪುರ: ಕಿರುನೀರು ಸರಬರಾಜು ಟ್ಯಾಂಕ್ಗಳಲ್ಲಿ ಅಶುಚಿತ್ವ ಮನೆಮಾಡಿದೆ. ಟ್ಯಾಂಕ್ ನೀರು ಬಳಸಿದವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ.ಹೀಗಿದ್ದರೂ ಸ್ಥಳೀಯ ಪಂಚಾಯಿತಿ ಟ್ಯಾಂಕ್ ಸ್ವಚ್ಛಗೊಳಿಸಿಲ್ಲ ಎಂದು ಅಂತರಘಟ್ಟೆ ನಿವಾಸಿಗಳು ದೂರಿದ್ದಾರೆ.
ಗ್ರಾಮದಲ್ಲಿ ಕೆಲವರು ಶುದ್ಧ ಘಟಕದ ನೀರನ್ನು ಕುಡಿಯಲು ಬಳಸುತ್ತಾರೆ. ಮತ್ತೆ ಹಲವರು ಗ್ರಾಮದಲ್ಲಿರುವ 6 ಕಿರುನೀರು ಸರಬರಾಜು ಟ್ಯಾಂಕ್ಗಳ ನೀರನ್ನು ಸ್ವಚ್ಛತೆಗೆ, ಅಡುಗೆಗೆ, ಕುಡಿಯಲು ಬಳಸುತ್ತಾರೆ.
ಟ್ಯಾಂಕ್ ನೀರು ಬಳಸಿದವರಲ್ಲಿ ತುರಿಕೆ, ಕಜ್ಜಿ ಮತ್ತಿತರ ಚರ್ಮದ ಕಾಯಿಲೆಗಳು ಕಾಣಿಸಿಕೊಂಡಿವೆ. ನೀರು ಕುಡಿದವರಿಗೆ ಗಂಟಲು ನೋವು, ಶೀತ, ಕೆಮ್ಮು, ಜ್ವರ ಬಂದಿದೆ. ಮಕ್ಕಳು, ಮಹಿಳೆಯರು, ವೃದ್ಧರು ಪ್ರತಿದಿನ ಆಸ್ಪತ್ರೆಗೆ ಅಲೆಯುವಂತಹ ವಾತಾವರಣ ಸೃಷ್ಟಿಯಾಗಿದೆ ಎಂದು ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.
ಟ್ಯಾಂಕ್ ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಟ್ಯಾಂಕ್ನಲ್ಲಿ ಪಾಚಿಕಟ್ಟಿದ್ದು, ಟ್ಯಾಂಕ್ನಿಂದ ಬರುವ ನೀರಲ್ಲಿ ಕಸ-ಕಡ್ಡಿ ಹೊರಬರುತ್ತಿದೆ. ಟ್ಯಾಂಕ್ ಸ್ವಚ್ಛಗೊಳಿಸಿ ನೀರು ಸರಬರಾಜು ಮಾಡುವಂತೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯ ಸಿದ್ಧಾರೂಢ ಆರೋಪಿಸಿದರು.
ಕೂಡಲೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು. ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಟ್ಯಾಂಕ್ ಸ್ವಚ್ಛ ಮಾಡಿ, ಶುದ್ಧ ನೀರು ಪೂರೈಸುವಂತೆ ಗ್ರಾಪಂಗೆ ನಿರ್ದೇಶನ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.