

ಅಂಕೋಲಾ: ತಾಲೂಕಿನ ಶಿರೂರಿನಲ್ಲಿ ಜು. 16ರಂದು ಸಂಭವಿಸಿದ ಗುಡ್ಡ ಕುಸಿತದ ಪರಿಣಾಮ ಸಂತ್ರಸ್ತರಾದ ಉಳುವರೆ ಗ್ರಾಮದ ವಿದ್ಯಾರ್ಥಿಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶುಕ್ರವಾರ ಪಾಠೋಪಕರಣ ಹಾಗೂ ಅಗತ್ಯ ಸಾಮಗ್ರಿಗಳ ನೆರವು ನೀಡಲಾಯಿತು.
ಗುಡ್ಡ ಕುಸಿತದ ಪರಿಣಾಮ ನದಿಯ ವಿರುದ್ಧ ದಿಕ್ಕಿನ ದಂಡೆಯ ಉಳುವರೆ ಗ್ರಾಮದ ಆರು ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿದ್ದರಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಟ್ಟೆ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ಕಳೆದುಕೊಂಡಿದ್ದರು. ಇವರಿಗೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ನೇತೃತ್ವ ದಲ್ಲಿ ಜಿಲ್ಲಾ ಮತ್ತು ತಾಲೂಕು ಘಟಕ ಹಾಗೂ ದಾನಿಗಳಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು 55ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿತರಿಸಿ, ಕೆಲವರಿಗೆ ನಗದು ನೀಡಲಾಯಿತು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯ ಪರಿಷತ್ ಕೇವಲ ಸಮ್ಮೇಳನ ಹಾಗೂ ಸಾಹಿತ್ಯದ ಕಾರ್ಯಕ್ರಮ ಸಂಘಟಿಸುವುದಕ್ಕಷ್ಟೇ ಸೀಮಿತವಲ್ಲ. ಕಷ್ಟದಲ್ಲಿರುವ ಜನರಿಗೆ ಅಗತ್ಯ ನೆರವು ನೀಡಲು ಕಂಕಣಬದ್ಧವಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರುವುದು ನಿಜಕ್ಕೂ ಮಾನವೀಯ ಕಾರ್ಯವಾಗಿದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ತಾಲೂಕಾಧ್ಯಕ್ಷರಾದ ಗೋಪಾಲಕೃಷ್ಣ ನಾಯಕ ಅಂಕೋಲಾ, ಎಸ್.ಎಚ್. ಗೌಡ ಹೊನ್ನಾವರ, ಜಿಲ್ಲಾ ಸಮಿತಿ ಸದಸ್ಯ ಡಾ. ವೆಂಕಟೇಶ ನಾಯ್ಕ, ಪಿ.ಎಂ. ಮುಕ್ರಿ, ಸಾಹಿತಿ ಬೀರಣ್ಣ ನಾಯಕ, ಹಿರೇಗುತ್ತಿ, ಪ್ರಮುಖರಾದ ಸಾಯಿ ಗಾಂವ್ಕರ, ಪ್ರಕಾಶ ಕುಂಜಿ, ಎಂ.ಬಿ. ಆಗೇರ, ಸುಜಿತ ನಾಯ್ಕ, ಎಸ್. ಪ್ರಕಾಶ ಶೆಟ್ಟಿ, ಟಿ.ಎಸ್. ಬಾಲಮಣಿ, ಮೋಹನ ಹಲವಾಯಿ, ಕೀರ್ತಿ ಗಾಂವಕರ, ಮುಸ್ತಾಕ ಶೇಖ್, ಅನಿಲ ದಂಡಗಲ, ಅನಿಲ ನಾಯ್ಕ, ಫ್ರಾನ್ಸಿಸ್ ಮಸ್ಕರಿನಸ್, ವಾಸರಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ, ಶಿಕ್ಷಕಿ ಸಂಧ್ಯಾ ನಾಯ್ಕ ಇತರರಿದ್ದರು.