ಪ್ರಭಾಕರ ಕೋರೆ ಜನ್ಮದಿನ ವಿದ್ಯಾರ್ಥಿಗಳಿಂದ ರಕ್ತದಾನ

1-ANKOLA-BLOOD CAMP
Published on

ಅಂಕೋಲಾ: ಮನುಷ್ಯನಿಗೆ ರಕ್ತವನ್ನು ಮರ- ಗಿಡಗಳು, ಪ್ರಾಣಿ- ಪಕ್ಷಿಗಳು ಕೊಡಲು ಸಾಧ್ಯವಿಲ್ಲ. ಅಲ್ಲದೆ, ಯಾವುದೇ ಪ್ರಯೋಗಾಲಯದಲ್ಲಿ ಸಹ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂದು ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷ ಮಂಜುನಾಥ ಹರಿಕಂತ್ರ ಹೇಳಿದರು.
ಕೆಎಲ್‌ಇ ಸಂಸ್ಥೆ ಬೆಳಗಾವಿ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 76ನೇ ಜನ್ಮ ದಿನದ ಅಂಗವಾಗಿ ಇಲ್ಲಿಯ ಕೆಎಲ್‌ಇ ಸಮೂಹ ಸಂಸ್ಥೆ, ಕಾರವಾರ ರಕ್ತ ನಿಧಿ ಕೇಂದ್ರ, ಲಯನ್ಸ್ ಕ್ಲಬ್ ಕರಾವಳಿ ಮತು ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ 7ನೇ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್‌ಐಸಿ ಪ್ರತಿನಿಧಿಗಳ ಒಕ್ಕೂಟದ ಸಲಹೆಗಾರ ಗಣೇಶ ನಾಯ್ಕ ಮಾತನಾಡಿ, ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರೆ ಮಾನವೀಯ ಸಮಾಜ ಕಾಣಲು ಸಾಧ್ಯ ಎಂದರು.
ಕಾರವಾರ ರಕ್ತ ನಿಧಿ ಕೇಂದ್ರದ ಮುಖ್ಯಾಧಿಕಾರಿ ಡಾ. ಸುಪ್ರಿಯಾ ಸಾವಂತ, ರಕ್ತದಾನದಿಂದಾಗುವ ಪ್ರಯೋಜನಗಳ ಕುರಿತು ಮಾತನಾಡಿದರು.
ಕೆಎಲ್‌ಇ ಸ್ಥಳೀಯ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಚಾರ್ಯ ಡಾ. ವಿನಾಯಕ ಹೆಗಡೆ, ಡಾ. ಗಂಗಾಧರ ಇಸರಣ್ಣವರ ನಿರ್ವಹಿಸಿದರು.
ರಕ್ತದಾನ: ಲಯನ್ಸ್ ಕ್ಲಬ್ ಸದಸ್ಯ ಡಾ. ಕರುಣಾಕರ ನಾಯ್ಕ 18ನೇ ಬಾರಿಗೆ, ಪ್ರಾಚಾರ್ಯ ಡಾ. ವಿನಾಯಕ ಹೆಗಡೆ 12ನೇ ಬಾರಿಗೆ ರಕ್ತದಾನ ಮಾಡಿದರು. ಶಿಬಿರದಲ್ಲಿ ಉಪನ್ಯಾಕಸರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ಒಟ್ಟು 50 ಜನ ರಕ್ತದಾನ ಮಾಡಿದರು. ಪ್ರಮುಖರಾದ ದುರ್ಗಾನಂದ ದೇಸಾಯಿ, ಎಸ್.ಆರ್. ಉಡುಪ, ಮಹಾಂತೇಶ ರೇವಡಿ, ಕಾರವಾರ ರಕ್ತ ನಿಧಿ ಕೇಂದ್ರದ ದೀಪಾ ಸಿ., ನಜ್ಮಾ, ಸುಮಿತ, ಸಾಮ್ಯುಲ್, ಶ್ವೇತಾ ನಾಯ್ಕ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net