ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಿ

7-ankola-3
Published on

ಅಂಕೋಲಾ: ನಾನು ಅಕ್ಷರಭ್ಯಾಸ ಕಲಿಯದಿದ್ದರೂ ಪರಿಸರ ಕಾಳಜಿಯಿಂದ ಇಷ್ಟು ಸಾಧನೆ ಮಾಡಿರುವೆ. ಅಕ್ಷರ ಕಲಿತ ನೀವು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಪರಿಸರ ಉಳಿಸುವ ಕಾರ್ಯದಲ್ಲಿ ನನಗಿಂತ ಹೆಚ್ಚಿನ ಪ್ರಶಸ್ತಿಗಳನ್ನು ಪಡೆಯಬೇಕು. ಪರಿಸರ ರಕ್ಷಣೆಗೆ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ಪದ್ಮಶ್ರೀ ತುಳಸಿ ಗೌಡ ಹೇಳಿದರು.
ತಾಲೂಕಿನ ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಬಲಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು.
ವಾಸರಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ ಮಾತನಾಡಿ, ನಾವು ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಸಾಧನೆ ಮಾಡಬಹುದು. ಆಗ ಪ್ರಶಸ್ತಿ ಮತ್ತು ಪುರಸ್ಕಾರಗಳು ನಮ್ಮನ್ನು ಅರಸಿಕೊಂಡು ಬರುತ್ತವೆ. ಇದಕ್ಕೆ ಪದ್ಮಶ್ರೀ ಡಾ. ತುಳಸಿ ಗೌಡ ಅವರೇ ಸಾಕ್ಷಿ ಎಂದರು.
ಮಾಸ್ತಿಕಟ್ಟಾ ವಲಯದ ಡಿಆರ್‌ಎಫ್‌ಒ ಅಭಿ ಧರೆಣ್ಣನವರ, ಪತ್ರಕರ್ತ ಕೆ. ರಮೇಶ, ಗ್ರಾಪಂ ಕಾರ್ಯದರ್ಶಿ ಚಿತ್ರಾ ನಾಯ್ಕ, ವೃಕ್ಷಮಾತೆ ಟ್ರಸ್ಟ್ ಸದಸ್ಯ ಸಂತೋಷ ಗೌಡ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಗೌಡ, ಗ್ರಾಪಂ ಸದಸ್ಯ ಸುಬ್ರಾಯ ಗೌಡ ಇದ್ದರು. ಮುಖ್ಯೋಧ್ಯಾಪಕ ಸಣ್ಣಪ್ಪ ನಾಯಕ, ಶಿಕ್ಷಕ ಗೌರೀಶ ನಾಯಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net