

ವಿಜಯವಾಣಿ ಸುದ್ದಿಜಾಲ ಉಡುಪಿ
ಎರಡೂವರೆ ದಶಕದಿಂದ ನನೆಗುದಿಗೆ ಬಿದ್ದಿರುವ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಕಾಮಗಾರಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು. ಅಂದಾಜು 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈಗಿರುವ ರಾಷ್ಟ್ರೀಯ ಹೆದ್ದಾರಿಗೆ ಸಮನಾಂತರವಾಗಿ ರೈಲ್ವೆ ಲೈನ್ ನಿರ್ಮಿಸಲಾಗುವುದು. ಅದಕ್ಕಾಗಿ ಓರ್ವ ಅಧಿಕಾರಿಯನ್ನೂ ಸಹ ನೇಮಕ ಮಾಡಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಸೆಪ್ಟೆಂಬರ್ 21ರಂದು ಮಾಧ್ಯಮದವರೊಂದಿಗೆ ಮಾತನಾಡಿ, ಪರಿಸರ ಹಾನಿ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿರುವ ಎಲ್ಲ ಪ್ರಕರಣಗಳೂ ಬಗೆಹರಿಯಲಿದೆ ಎಂದರು.
ಹಿಂದೆ ಜಾರ್ಜ್ ಫರ್ನಾಂಡೀಸ್ ಅವರು ರೈಲ್ವೆ ಸಚಿವರಾಗಿದ್ದಾಗ ಅಂದಿನ ಪರಿಸ್ಥಿತಿಗೆ ತಕ್ಕಂತೆ ಕೊಂಕಣ ರೈಲ್ವೆ ಆರಂಭಿಸಿದ್ದರು. ಕೊಂಕಣ ರೈಲ್ವೆಯಿಂದ ಸಾಧಕ-ಬಾಧಕ ಎರಡೂ ಇದೆ. ಹೀಗಾಗಿ ಕೇಂದ್ರ ರೈಲ್ವೆಯಲ್ಲಿ ವಿಲೀನಗೊಳಿಸಬೇಕು ಎಂಬ ಅಭಿಪ್ರಾಯವೂ ಇದೆ. ಈ ಕುರಿತು ಚರ್ಚೆಯೂ, ಅಧ್ಯಯನವೂ ನಡೆದಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೂ ತಂದಿದ್ದೇವೆ. ಹೀಗಾಗಿ ಕೊಂಕಣ ರೈಲ್ವೆಗೆ ಹೊಸ ರೂಪ ನೀಡಲಾಗುವುದು ಎಂದರು.
ಕೊಂಕಣ ರೈಲ್ವೆ ಅಭಿವೃದ್ಧಿಗಾಗಿ ಮೂವರು ಜನರಲ್ ಮೆನೇಜರ್ ಹಾಗೂ ಸಂಬಂಧಿತ ಅಧಿಕಾರಿಗಳನ್ನು ಕರೆಸಿ ಪ್ರಸ್ತಾವನೆ ಸಿದ್ಧಗೊಳಿಸಿದ್ದೇನೆ. ಕೊಂಕಣದ ಐದು ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ. ಕೇರಳ ಹಾಗೂ ಪುದಿಚೇರಿ ರಾಜ್ಯದವರು ಎನ್ಒಸಿ ನೀಡಿದ್ದಾರೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದಿಂದ ಇನ್ನೂ ಬಂದಿಲ್ಲ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ರೂಪು-ರೇಷೆ ಸಿದ್ಧವಾಗಲಿದೆ ಎಂದರು.
ರಾಜ್ಯದಲ್ಲಿ ಸರ್ಕಾರ ಜನಗಣತಿ ಆರಂಭಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಅವರಿಗೆ ತಲೆನೂ ಇಲ್ಲ; ಬುಡಾನೂ ಇಲ್ಲ. ನಾವು ಮಾಡುತ್ತಿರುವುದು ಜಾತಿ ಗಣತಿಯಲ್ಲ. ಅದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎನ್ನುತ್ತಿದ್ದಾರೆ. ಹೈಕೋರ್ಟ್ ಮಧ್ಯ ಪ್ರವೇಶ ಮಾಡಿದ್ದರೆ ನಿಜಕ್ಕೂ ಜನರಿಗೆ ಒಳ್ಳೆಯದಾಗುತ್ತಿತ್ತು. ಸಿದ್ದರಾಮಯ್ಯ ಮಾಡಬಾರದ ಕೆಲಸದ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಅದರಲ್ಲಿ ಅವರು ಮಾಸ್ಟರ್. ಗಣತಿ ನೆಪದಲ್ಲಿ ಜನರ ನೆಮ್ಮದಿ, ಸ್ನೇಹವನ್ನೂ ಹಾಳು ಮಾಡುತ್ತಿದ್ದಾರೆ. ಸಮೀಕ್ಷೆ ಬೇಡವೆಂದು ಹೇಳುತ್ತಿಲ್ಲ. ಕೇಂದ್ರ ಸರ್ಕಾರವೇ ಗಣತಿ ಮಾಡುತ್ತಿರುವಾಗ ಮಧ್ಯದಲ್ಲಿ ಇವರದ್ದು ಮತ್ತೇನು ಸಮೀಕ್ಷೆ? 2ನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಸಣ್ಣತನ ತೋರುವುದನ್ನು ಬಿಟ್ಟಿದ್ದರೆ ನಿಜವಾಗಲೂ ಅವರು ಹೀರೋ ಆಗುತ್ತಿದ್ದರು ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮವಲ್ಲ. ಧರ್ಮ ಇರುವುದು ಕೇವಲ ಆರು ಮಾತ್ರ. 7ನೇ ಧರ್ಮವಿಲ್ಲ. ಹೀಗಾಗಿ ಸಮೀಕ್ಷೆಯಲ್ಲಿ ಜಾತಿಯನ್ನು ವೀರಶೈವ, ಲಿಂಗಾಯತ ಎಂದೂ ಧರ್ಮವನ್ನು ಹಿಂದು ಎಂದೇ ಬರೆಯುವಂತೆ ಹಾಗೂ ಯಾವುದೇ ಒಳಪಂಗಡ ಇದ್ದರೂ ಅದನ್ನು ಉಲ್ಲೇಖಿಸುವಂತೆ ಸಮಾಜದವರಿಗೆ ಮಾಹಿತಿ ನೀಡಲಾಗುತ್ತಿದೆ. ಸಮೀಕ್ಷೆ ಹೆಸರಲ್ಲಿ ಸಿದ್ದರಾಮಯ್ಯ ಎಲ್ಲರನ್ನೂ ಒಡೆಯುವ ಕೆಲಸ ಮಾಡುತ್ತಿದ್ದಾರೆ. 93 ಜಾತಿಗಳಿಗೆ ಕೊಕ್ ಕೊಟ್ಟಿದ್ದೇನೆ ಎನ್ನುತ್ತಾರೆ. ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ. ವೋಟ್ ಬ್ಯಾಂಕ್ ಭದ್ರ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ರೈಲ್ವೆ ನಿಲ್ದಾಣಕ್ಕೆ ಶ್ರೀಕೃಷ್ಣ ರೈಲ್ವೆ ನಿಲ್ದಾಣ ಎಂಬ ಹೆಸರಿಡುವಂತೆ ಪ್ರಸ್ತಾವನೆ ಬಂದಿದೆ. ರಾಜ್ಯ ಸರ್ಕಾರದಿಂದ ಎನ್ಒಸಿ ಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರದ ಸಮ್ಮತಿ ಬಂದ ಕೂಡಲೇ ಕೇಂದ್ರ ಸರ್ಕಾರದ ಗಮನಕ್ಕೆ ತಂದು ಉಡುಪಿ ರೈಲ್ವೆ ನಿಲ್ದಾಣಕ್ಕೆ ಶ್ರೀಕೃಷ್ಣ ಎಂದು ಮರು ನಾಮಕರಣ ಮಾಡಲಾಗುವುದು. | ವಿ. ಸೋಮಣ್ಣ. ರೈಲ್ವೆ ಸಚಿವ