ಅಂಕೋಲಾ ಕೆನರಾ ಬ್ಯಾಂಕ್  ಶಾಖಾ ವ್ಯವಸ್ಥಾಪಕ ಮಜ್ಜಿಗುಡ್ಡ ಸಿಐಡಿ ವಶಕ್ಕೆ

ANK MAJJIGUDDA CID
Published on

ಅಂಕೋಲಾ: ಇಲ್ಲಿನ (ಸಿಂಡಿಕೇಟ್) ಕೆನರಾ ಬ್ಯಾಂಕ್ 2ನೇ ಶಾಖೆಯಲ್ಲಿ 2022ರ ನವೆಂಬರ್​ನಲ್ಲಿ ಗ್ರಾಹಕರ ಖಾತೆಗೆ ಕನ್ನ ಹಾಕಿ ಕೋಟ್ಯಂತರ ರೂಪಾಯಿ ವಂಚಿಸಿದ ಶಾಖಾ ವ್ಯವಸ್ಥಾಪಕ ಗದಗ ಜಿಲ್ಲೆಯ ಹುಲಕೋಟಿಯ ವೆಂಕಟೇಶ ಮಜ್ಜಿಗುಡ್ಡನನ್ನು ಗುರುವಾರ ಸಿಐಡಿ ಪೊಲೀಸರು ಬೆಳಗಾವಿಯಲ್ಲಿ ವಶಕ್ಕೆ ಪಡೆದು, ಶನಿವಾರ ಕೆನರಾ ಬ್ಯಾಂಕ್​ಗೆ ಆಗಮಿಸಿ ಕಡತಗಳನ್ನು ಪರಿಶೀಲಿಸಿದ್ದಾರೆ.

ವೆಂಕಟೇಶ ಮಜ್ಜಿಗುಡ್ಡ ಕೆಲ ವಿವಿಧ ಸ್ವಸಹಾಯ ಸಂಘದವರಿಗೆ ಸಾಲದ ಖಾತೆ ಮುಕ್ತಾಯಗೊಳಿಸಿದ ಸಂದರ್ಭದಲ್ಲಿ ಹೊಸ ಸಾಲದ ಖಾತೆ ತೆರೆದು ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾನೆ ಎನ್ನುವುದು ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಲೆಕ್ಕಪತ್ರ ತಪಾಸಣೆ ವೇಳೆಯಲ್ಲಿ ಕಂಡುಬಂದಿತ್ತು. ಹೀಗೆ 2 ಕೋಟಿ ರೂ. ಗಳಿಗಿಂತ ಹೆಚ್ಚು ಹಣ ವಂಚಿಸಿದ್ದಾನೆ ಎನ್ನಲಾಗಿದೆ. ಬ್ಯಾಂಕ್​ನ ಇತರ ಸಿಬ್ಬಂದಿಯ ಐಡಿ ಬಳಸಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚಿಸಿರುವ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಕೋಟ್ಯಂತರ ರೂ.ಗಳ ಅಪರಾತಪರಾ ಆಗಿದ್ದರಿಂದ ಮೂರು ತಿಂಗಳ ಹಿಂದಷ್ಟೇ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಾಗಿತ್ತು.

ಎನ್​ಜಿಒ ನಿರ್ಲಕ್ಷ: ಬಡ ಮಹಿಳೆಯರ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸ್ವಾವಲಂಬನೆ, ಹಣಕಾಸಿನ ಶಿಸ್ತು ಕಲಿಸಿ ಬ್ಯಾಂಕ್ ವಹಿವಾಟಿನ ಕುರಿತು ಉಸ್ತುವಾರಿ ವಹಿಸಿ ಅವರ ಅಭಿವೃದ್ಧಿಗೆ ನೆರವಾಗುವುದಕ್ಕಾಗಿ ಉಸ್ತುವಾರಿ ಮಾಡಬೇಕಾದ ಕೆಲ ಎನ್​ಜಿಒಗಳ ದಿವ್ಯ ನಿರ್ಲಕ್ಷ್ಯ ವಂಚಕನಿಗೆ ವರದಾನವಾಗಿರುವುದು ಪ್ರಕರಣಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ. ಎನ್​ಜಿಒಗಳನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಐಡಿ ಡಿವೈಎಸ್ಪಿ ಆರ್.ಎಸ್. ಜಾಗೀದಾರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಸಿಐಡಿ ಇನ್​ಸ್ಪೆಕ್ಟರ್, ಸಿಬ್ಬಂದಿ ಹಾಗೂ ಅಂಕೋಲಾ ಪೊಲೀಸ್ ಸಿಬ್ಬಂದಿ ಓಮು ನಾಯ್ಕ, ರಾಜೇಶ ನಾಯ್ಕ, ಇತರರಿದ್ದರು.

ಬ್ಯಾಂಕ್ ಗ್ರಾಹಕರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ಮುಗಿಸಲು ಇನ್ನೂ ಒಂದು ವಾರ ಬೇಕಾಗಬಹುದು. ಈ ಪ್ರಕರಣದಲ್ಲಿ ಇನ್ನೂ ಹಲವರನ್ನು ತನಿಖೆಗೆ ಒಳಪಡಿಸಲಾಗುವುದು. | ಆರ್.ಎಸ್. ಜಾಗೀದಾರ ಡಿವೈಎಸ್ಪಿ ಸಿಐಡಿ ಘಟಕ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net