ಶೈಕ್ಷಣಿಕವಾಗಿ ಉತ್ತರದ ಗೌರವ ಹೆಚ್ಚಿಸಿದ ಅಂಕಿತಾ

Ankita raised the respect of North academically
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಶನಿವಾರ ಜಿಪಂ ಹಾಗೂ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್ಸೆಸ್ಸೆಲ್ಸಿ ಟಾಪರ್ ಅಂಕಿತಾ ಕೊಣ್ಣೂರ ಅವರನ್ನು ಸನ್ಮಾನಿಸಲಾಯಿತು. ಡಿಸಿ ಜಾನಕಿ ಕೆ.ಎಂ., ಜಿಪಂ ಸಿಇಒ ಶಶಿಧರ ಕುರೇರ, ಪಿಡಿಒಗಳ ಸಂಘದ ರಾಜ್ಯಾಧ್ಯಕ್ಷ ರಾಜು ವಾರದ, ಡಿಎಸ್‌ಒ ಅಮರೇಶ್ ನಾಯಕ ಮತ್ತಿತರರು ಇದ್ದರು.
Published on

ಬಾಗಲಕೋಟೆ: ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಟಾಪರ್ ಆಗಿರುವ ಅಂಕಿತಾ ಕೊಣ್ಣೂರ ಸಾಧನೆ ಬರೀ ಆಕೆ ಕಲಿತ ಶಾಲೆ, ಜಿಲ್ಲೆಗೆ ಮಾತ್ರವಲ್ಲದೇ, ಶೈಕ್ಷಣಿಕವಾಗಿ ಉತ್ತರ ಕರ್ನಾಟಕದ ಗೌರವ ಹೆಚ್ಚಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ತ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ನೂತನ ಸಭಾ ಭವನದಲ್ಲಿ ಶನಿವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಹಾಗೂ ಪಾಲಕರು ಮತ್ತು ಶಿಕ್ಷಕರನ್ನು ಸತ್ಕರಿಸಿ ಮಾತನಾಡಿದರು.

ಹಲವು ದಶಕಗಳ ಹಿಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆ ನಿರ್ಮಿಸುತ್ತಿರುವ ಶಾಲೆಗಳು ಎಂದರೆ ಅವು ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಕಂಡುಬರುತ್ತಿದ್ದವು. ಅದರಲ್ಲೂ ಮರಿಮಲ್ಲಪ್ಪ ಶಾಲೆ ಮುಂಚೂಣಿಯಲ್ಲಿರುತ್ತಿತ್ತು. ಈ ವರ್ಷ ಅಂಕಿತಾಳ ಸಾಧನೆ ಇಡೀ ಉತ್ತರ ಕರ್ನಾಟಕ ಭಾಗವು ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಸಾಗುತ್ತಿರುವುದು ಕಂಡುಬಂದಿದೆ. ಆ ದಿಸೆಯಲ್ಲಿ ಜಿಲ್ಲಾ ಪಂಚಾಯಿತಿ ಪ್ರತಿ ಗ್ರಾಮದಲ್ಲಿ ಗ್ರಾ.ಪಂ. ಮೇಲುಸ್ತುವಾರಿಯಲ್ಲಿ ಗ್ರಂಥಾಲಯ, ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದೆಂದು ತಿಳಿಸಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ರಾಜ್ಯದಲ್ಲಿ ಬಾಲ್ಯವಿವಾಹ ಜಿಲ್ಲೆಯೆಂಬ ಕಳಂಕ ಹೊತ್ತಿದ್ದ ಬಾಗಲಕೋಟೆಗೆ ಅಂಕಿತಾ ಬಸಪ್ಪ ಕೊಣ್ಣೂರ ಇದೀಗ ಹೊಸ ಆಯಾಮ ನೀಡಿ, ಆ ಕಳಂಕ ಅಳಿಸಿ ಹಾಕಿದ್ದಾರೆ ಎಂದು ಬಣ್ಣಿಸಿದರು.

ಬಾಗಲಕೋಟೆ ಜಿಲ್ಲೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಅದರಲ್ಲೂ ಎಸ್ಸೆಸ್ಸೆಲ್ಸಿಯಲ್ಲಿ 27ನೇ ಸ್ಥಾನದಲ್ಲಿತ್ತು. ಈ ಬಾರಿ 13ನೇ ಸ್ಥಾನ ಪಡೆದು ಮೇಲೆ ಬಂದಿದೆ. ಇದರ ಜೊತೆಗೆ ಜಿಲ್ಲೆಯ ಅಂಕಿತಾ ಕೊಣ್ಣೂರು ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದುಕೊಂಡಿರುವುದು ಜಿಲ್ಲೆಗೆ ಹೊಸ ದಿಕ್ಕು ತೋರಿಸಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಹೆಣ್ಣು ಮಗುವಿನ ಪಾಲಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಹೆಣ್ಣು ಮಕ್ಕಳಿಗೆ ಕನಿಷ್ಠ 18 ವರ್ಷ ಆಗುವವರೆಗಾದರೂ ಶಿಕ್ಷಣ ಕೊಡಿಸಬೇಕು. ಸಾಧಕಿ ಅಂಕಿತಾಳ ತಾಯಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 84 ಅಂಕ ಪಡೆದಿದ್ದರೂ ಗೃಹಿಣಿಯಾಗಿದ್ದಾರೆ. ಆದರೆ ತಮ್ಮಲ್ಲಿರುವ ಶೈಕ್ಷಣಿಕ ಚಿಲುಮೆಯನ್ನು ಮಗಳ ಮೂಲಕ ಸಾಧಿಸಿ ತೋರಿಸಿದ್ದಾರೆ. ಇವರ ಈ ಸಾಧನೆ ಎಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಬಾಲ್ಯವಿವಾಹ ಮಾಡಲು ಮುಂದಾಗುತ್ತಿರುವ ಪಾಲಕರಿಗೆ ಅಂಕಿತಾಳ ಸಾಧನೆ ಮಾದರಿಯಾಗಿದೆ. ಈಗಾಗಲೇ ಬಾಲ್ಯವಿವಾಹ ಬಂಧಕ್ಕೊಳಗಾದ ಅನೇಕ ಹೆಣ್ಣು ಮಕ್ಕಳಲ್ಲೂ ಕೂಡ ಅಂಕಿತಾಳಂತಹ ಪ್ರತಿಭೆಗಳು ಇದ್ದಿರಬಹುದೇನು ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬುದಕ್ಕೆ ಅಂಕಿತಾಳೆ ಸಾಕ್ಷಿಯಾಗಿದ್ದಾರೆ. ಪ್ರತಿಭೆ ತೋರಿಸಲು ಉತ್ತಮ ಶಾಲೆ ಮುಖ್ಯವಲ್ಲ ಸಾಧನೆ ಮುಖ್ಯ ಎಂಬುದನ್ನು ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ತೋರಿಸಿದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೆಬ್ ಕಾಸ್ಟಿಂಗ್ ಮಾಡುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುವಂತಹ ಜಿಲ್ಲೆಗಳನ್ನು ಗುರುತಿಸುವಂತ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ಮುಖ್ಯ ಲೆಕ್ಕಾಧಿಕಾರಿ ಸಿದ್ಧರಾಮೇಶ್ವರ ಉಕ್ಕಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ರಾಜು ವಾರದ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಾಧನೆಗೆ ಅಂಕ ಮಹತ್ವವಲ್ಲ

ಸನ್ಮಾನ ಸ್ವೀಕರಿಸಿ ಮಾತನಾಡಿದ ಟಾಪರ್ ಅಂಕಿತಾ ಕೊಣ್ಣೂರ, ನನ್ನ ಶ್ರಮದ ಜೊತೆ ಕುಟುಂಬ, ಶಾಲಾ ಶಿಕ್ಷಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ತುಂಬು ಸಹಕಾರ ನೀಡಿದೆ. ಇದರಿಂದಲೇ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಸಾಧಿಸುವ ಛಲವೊಂದಿದ್ದರೆ ಮಾತ್ರ ಸಾಲದು. ಅಲ್ಲಿಯ ವಾತಾವರಣ ಹಾಗೂ ಪ್ರೇರಣೆ ಇದ್ದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನನ್ನ ಕೆಲ ಮಿತ್ರರು ಪರೀಕ್ಷೆಯ ಭಯದಲ್ಲಿ ಅಂಕ ಪಡೆಯುವಲ್ಲಿ ವಿಫಲರಾಗಿರಬಹುದು, ಆದರೆ ಅವರು ಕೂಡ ಬುದ್ದಿವಂತರೇ, ಇಲ್ಲಿ ಅಂಕ ಮಹತ್ವವಾಗುವದಿಲ್ಲವೆಂದರು ಎಂದು ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ ಇಡೀ ರಾಜ್ಯಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿ ಅಂಕಿತಾ ಎನ್ನುವುದು ಹೆಮ್ಮೆಯ ಸಂಗತಿ. ಆ ಬಾಲಕಿ ನಮ್ಮ ಜಿಲ್ಲೆಯ ಅದರಲ್ಲೂ ಸರ್ಕಾರಿ ಶಾಲೆಯ ಬಾಲಕಿ ಎನ್ನುವುದು ಗಮನಾರ್ಹ. ಅಂಕಿತಾ ಸಾಧನೆ ಜಿಲ್ಲೆಯ ಮತ್ತಷ್ಟು ಮಗದಷ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರೇರಣೆ ಆಗಲಿ. ಪ್ರತಿ ವರ್ಷ ಜಿಲ್ಲೆ ಟಾಪರ್‌ನಲ್ಲಿ ಮುಂದುವರಿಯಲಿ.
ಶಶಿಧರ ಕುರೇರ, ಸಿಇಒ, ಜಿಪಂ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net