ಬೇವಿನಹಳ್ಳಿಕೊಪ್ಪಲಿನಲ್ಲಿ ಗಿರಿಜಾ ಕಲ್ಯಾಣೋತ್ಸವ

22-kkr1(2-24
Published on

ಕಿಕ್ಕೇರಿ: ಸಮೀಪದ ಬೇವಿನಹಳ್ಳಿಕೊಪ್ಪಲು ಗ್ರಾಮದ ಅಂಕನಾಥೇಶ್ವರ ದೇಗುಲದಲ್ಲಿ ಗುರುವಾರ ಗಿರಿಜಾ ಕಲ್ಯಾಣೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಹೇಮಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತರು, ಧರ್ಮದರ್ಶಿಗಳು ದೇಗುಲಕ್ಕೆ ಆಗಮಿಸಿದರು. ಅರ್ಚಕರು ಹೇಮಾವತಿ ನದಿಯಿಂದ ಗಂಗೆಯನ್ನು ಪೂರ್ಣಕುಂಭದೊಂದಿಗೆ ಹೊತ್ತು ತಂದರು. ಬಳಿಕ ಪ್ರಸನ್ನ ಪಾರ್ವತಿ ಅಂಕನಾಥೇಶ್ವರ ಮೂರ್ತಿಗೆ ಹವಭೃತ ಸ್ನಾನ, ಮೃತ್ತಿಕೆ, ಹರಿದ್ರ, ಕುಂಕುಮ, ಅಕ್ಷತೆ, ಪುಷ್ಪ, ಸುವರ್ಣ, ಗಂಗಾಜಲ ತೀರ್ಥಸ್ನಾನ ಕೈಂಕರ್ಯ ನೆರವೇರಿಸಲಾಯಿತು. ವಿವಿಧ ಹೋಮ ಹವನಾದಿಗಳು ಜರುಗಿದವು.
ಶಿವ-ಪಾರ್ವತಿ ಮೂರ್ತಿಗಳನ್ನು ಒಂದೆಡೆ ಪ್ರತಿಷ್ಠಾಪಿಸಿ ವಿವಿಧ ಪುಷ್ಪ, ವಸ್ತ್ರ ಹಾಗೂ ಆಭರಣಗಳಿಂದ ಶೃಂಗರಿಸಲಾಯಿತು. ಉಪನಯನ, ಹೆಣ್ಣು ಒಪ್ಪಿಗೆ ಶಾಸ್ತ್ರ ಮಾಡಲಾಯಿತು. ಧಾರಾ ಮುಹೂರ್ತ ಸಭಾಮಂಟಪ ನಿರ್ಮಿಸಲಾಯಿತು.

ಶಿವನ(ವರ) ಪರವಾಗಿ ಸ್ವರ್ಣ ನಂಜುಂಡಸ್ವಾಮಿ ದಂಪತಿ ಹಾಗೂ ಗಿರಿಜಾ(ವಧು) ಪರವಾಗಿ ಭಾರತಿ ರವಿ ದಂಪತಿ ಸಾರಥ್ಯ ವಹಿಸಿದ್ದರು. ವರೋಪಚಾರ, ಒಪ್ಪುವಿಳ್ಳೆ ಶಾಸ್ತ್ರದಂತಹ ಹಲವು ಕಾರ್ಯಕ್ರಮಗಳು ನಡೆದವು. ಶಾಸ್ತ್ರೋಕ್ತವಾಗಿ ಮಂಗಳವಾದ್ಯದೊಂದಿಗೆ ಕಲ್ಯಾಣೋತ್ಸವ ನೆರವೇರಿತು. ತೀರ್ಥ ಪ್ರಸಾದ, ಊಟೋಪಚಾರ ನಡೆಯಿತು.

ಕಲ್ಯಾಣೋತ್ಸವದ ಅಂಗವಾಗಿ ಸುಬ್ರಹ್ಮಣೇಶ್ವರ, ಗಣಪತಿ, ನವಗ್ರಹ ಮೂರ್ತಿ, ನಾಗಸರ್ಪ ಮೂರ್ತಿಗಳಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ಎಂ.ಎಸ್.ಸುಬ್ಬುಕೃಷ್ಣ, ಎಂ.ಎಸ್.ಚಂದ್ರು, ನಾಗರಾಜು, ನಾಗಶಯನ, ರವಿ, ನಂಜುಂಡಸ್ವಾಮಿ, ಭಾಗ್ಯಲಕ್ಷ್ಮೀ, ಸ್ವರ್ಣ, ಕಿಕ್ಕೇರಿ ವೆಂಕಟೇಶ್, ಅರ್ಚಕ ಸುಬ್ರಹ್ಮಣ್ಯ, ಸುರೇಶ್, ಮಂದಗೆರೆ ತೋಟದ ಮನೆ ಕುಟುಂಬಸ್ಥರು, ಬೇವಿನಹಳ್ಳಿ, ಬೇವಿನಹಳ್ಳಿ ಕೊಪ್ಪಲು ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net